

ಬೆಂಗಳೂರು: ಆರ್‌ಸಿಬಿ ತಂಡ ಆರಂಭಿಕ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿತ್ತು. ಫಾಫ್ ಡು ಪ್ಲೆಸಿಸ್ ನಾಯಕತ್ವ ಕೌಶಲ, ದಿನೇಶ್ ಕಾರ್ತಿಕ್ ಫಿನಿಷರ್ ಪಾತ್ರ, ಮ್ಯಾಕ್ಸ್‌ವೆಲ್ ಆಲ್ರೌಂಡ್ ಆಟ, ವನಿಂದು ಹಸರಂಗ ಸ್ಪಿನ್ ದಾಳಿ, ಹರ್ಷಲ್ ಪಟೇಲ್ ವೇಗದ ಬೌಲಿಂಗ್ ಗಮನಸೆಳೆದಿತ್ತು. ಆದರೆ, ಆರ್‌ಸಿಬಿ ತಂಡ ನಂತರದ 6 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದಿದೆ. ಇದರಿಂದ ಈಗ ಐಪಿಎಲ್-15ರಲ್ಲಿ ಲೀಗ್ ಹಂತದಲ್ಲೇ ಹೊರಬೀಳುವ ಅಪಾಯ ಎದುರಾಗಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಂಡ ದೊಡ್ಡ ಸೋಲು ಪ್ಲೇಆಫ್ ರೇಸ್‌ನಲ್ಲಿ ದೊಡ್ಡ ಹಿನ್ನಡೆ ತಂದಿದೆ.
ಗುರುವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸವಾಲು ಪ್ಲೆಸಿಸ್ ಬಳಗದ ಮುಂದಿದೆ. ಆದರೆ ಇದರಲ್ಲಿ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ಎದುರಾಳಿಯಾಗಿರುವುದು ಈ ಸವಾಲನ್ನು ಇನ್ನಷ್ಟು ಕಠಿಣಗೊಳಿಸಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಸೋಮವಾರ ಪಂಜಾಬ್ ವಿರುದ್ಧ ಗೆದ್ದ ಬಳಿಕ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಆರ್‌ಸಿಬಿ ಕೈಯಿಂದ ಕಸಿದುಕೊಂಡಿದೆ. ಹೀಗಾಗಿ ಆರ್‌ಸಿಬಿ ತಂಡ ಗುಜರಾತ್ ವಿರುದ್ಧ ಗೆದ್ದರೂ, ಸರಾಗವಾಗಿ ಪ್ಲೇಆಫ್ಗೇರಬೇಕಾದರೆ ಡೆಲ್ಲಿ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲಲಿ ಎಂದು ಪ್ರಾರ್ಥಿಸಬೇಕಾಗಿದೆ.
ಆರ್‌ಸಿಬಿ ಪ್ಲೇಆಫ್ ಹಾದಿ...
ಗುಜರಾತ್ ವಿರುದ್ಧ ಗೆದ್ದರೆ: ಆರ್‌ಸಿಬಿ ಕೊನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ ಗೆದ್ದರೆ ಆಗ ಒಟ್ಟು ಅಂಕ ಗಳಿಕೆ 16ಕ್ಕೆ ಏರಲಿದೆ. ಆದರೆ ಇದರಿಂದ ಪ್ಲೇಆಫ್ ಪ್ರವೇಶ ಖಚಿತವಾಗುವುದಿಲ್ಲ. ಡೆಲ್ಲಿ ತಂಡ ಶನಿವಾರ ಮುಂಬೈ ವಿರುದ್ಧದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸೋತರಷ್ಟೇ ಆರ್‌ಸಿಬಿ ಪ್ಲೇಆಫ್ ಪ್ರವೇಶ ಸಲೀಸು ಆಗಲಿದೆ. ಡೆಲ್ಲಿ ತಂಡ ಮುಂಬೈ ವಿರುದ್ಧ ಗೆದ್ದರೂ ಆರ್‌ಸಿಬಿ ಪ್ಲೇಆಫ್ಗೇರಬೇಕಾದರೆ, ಗುಜರಾತ್ ವಿರುದ್ಧ ಬೃಹತ್ ಅಂತರದಿಂದ ಗೆಲ್ಲಬೇಕಾಗುತ್ತದೆ. ಆಗ ರನ್‌ರೇಟ್ ಲೆಕ್ಕಾಚಾರದಲ್ಲಿ ರಾಜಸ್ಥಾನ, ಲಖನೌ (ಇವೆರಡೂ ತಂಡಗಳು ಕೊನೇ ಲೀಗ್ ಸೋತಿದ್ದರೆ) ಮತ್ತು ಡೆಲ್ಲಿ ಪೈಕಿ ಒಂದನ್ನಾದರೂ ಹಿಂದಿಕ್ಕಿದರೆ ಪ್ಲೇಆಫ್ಗೇರಬಹುದು.
ಗುಜರಾತ್ ವಿರುದ್ಧ ಸೋತರೆ: ಆರ್‌ಸಿಬಿ ಕೊನೇ ಲೀಗ್ ಪಂದ್ಯದಲ್ಲಿ ಸೋತರೂ ಪ್ಲೇಆಫ್ಗೇರಬೇಕಾದರೆ ಪವಾಡವೇ ನಡೆಯಬೇಕು. ಯಾಕೆಂದರೆ ಕೆಟ್ಟ ರನ್‌ರೇಟ್ ಆರ್‌ಸಿಬಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಒಂದು ವೇಳೆ ಡೆಲ್ಲಿ ತಂಡ ಕೂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಹೀನಾಯವಾಗಿ ಸೋತರೆ ಆಗ ಆರ್‌ಸಿಬಿ ತಂಡಕ್ಕಿಂತ ಹೆಚ್ಚಾಗಿ ಕೆಕೆಆರ್, ಪಂಜಾಬ್ ಅಥವಾ ಸನ್ರೈಸರ್ಸ್ ತಂಡಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೆಕೆಆರ್, ಪಂಜಾಬ್/ಸನ್ರೈಸರ್ಸ್ ಕೊನೇ ಲೀಗ್ ಪಂದ್ಯಗಳಲ್ಲಿ ಗೆದ್ದರೆ ಆಗ 4 ತಂಡಗಳು ತಲಾ 14 ಅಂಕ ಗಳಿಸಲಿದ್ದು ರನ್‌ರೇಟ್ ನಿರ್ಣಾಯಕವಾಗಲಿದೆ.