ಇಂದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸನ್‌ರೈಸರ್ಸ್‌ ಸವಾಲು, ಹೀಗಿದೆ ಪ್ಲೇಆಫ್​ ಲೆಕ್ಕಾಚಾರ...

dc sun web
Published on

ದುಬೈ: ಪ್ಲೇಆಫ್​ ಸ್ಥಾನ ಖಚಿತಪಡಿಸಿಕೊಳ್ಳಲು ಇನ್ನೊಂದು ಗೆಲುವಿನ ಅಗತ್ಯ ಎದುರಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆಸೆ ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇಬೇಕಾಗಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-13ರಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ.

ಉತ್ತಮ ಲಯದಲ್ಲಿ ಸಾಗುತ್ತಿದ್ದ ಶ್ರೇಯಸ್ ಅಯ್ಯರ್ ಪಡೆ ಇದೀಗ ಕಿಂಗ್ಸ್ ಇಲೆವೆನ್ ಮತ್ತು ಕೆಕೆಆರ್ ವಿರುದ್ಧ ಸತತ 2 ಪಂದ್ಯಗಳಲ್ಲಿ ಸೋಲು ಕಂಡು ಒತ್ತಡಕ್ಕೆ ಸಿಲುಕಿದೆ. ಈ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳುವ ಅವಕಾಶವೂ ಡೆಲ್ಲಿ ತಂಡದ ಎದುರು ಇದೆ. ಉಳಿದ 3 ಪಂದ್ಯಗಳ ಪೈಕಿ 1ರಲ್ಲಿ ಗೆದ್ದರೂ, ಡೆಲ್ಲಿಗೆ ಪ್ಲೇಆಫ್​ ಖಚಿತವಿದೆ. ಆದರೆ ಅಗ್ರ 2 ತಂಡಗಳ ಪೈಕಿ ಒಂದು ತಂಡವಾಗಿ ಪ್ಲೇಆ್ ಹಂತಕ್ಕೇರುವ ಅವಕಾಶಕ್ಕಾಗಿ ಈ ಪಂದ್ಯದಲ್ಲಿ ಗೆಲುವು ಅಗತ್ಯವಾಗಿದೆ.

ಪಂಜಾಬ್ ವಿರುದ್ಧ ನಾಟಕೀಯ ಕುಸಿತ ಕಂಡು ಸಾಧಾರಣ ಮೊತ್ತವನ್ನು ಬೆನ್ನಟ್ಟಲಾಗದೆ ಎಡವಿರುವ ಡೇವಿಡ್ ವಾರ್ನರ್ ಪಡೆ ಉಳಿದ ಮೂರೂ ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್​ ಸ್ಥಾನ ಖಚಿತವಿಲ್ಲ. ರನ್‌ರೇಟ್ ಲೆಕ್ಕಾಚಾರದಲ್ಲಿ ಮೇಲುಗೈ ಸಾಧಿಸುವ ಜತೆಗೆ ಇತರ ಪಂದ್ಯಗಳ ಫಲಿತಾಂಶವೂ ಪೂರಕವಾಗಿ ಬಂದರಷ್ಟೇ ಸನ್‌ರೈಸರ್ಸ್‌ಗೆ ಪ್ಲೇಆಫ್​ ಅವಕಾಶವಿದೆ. ಒಂದು ವೇಳೆ ಸನ್‌ರೈಸರ್ಸ್‌ ಸೋತರೆ, ಇನ್ನೆರಡು ಪಂದ್ಯ ಬಾಕಿ ಇರುವಂತೆಯೇ ಟೂರ್ನಿಯಿಂದ ಹೊರಬೀಳಲಿದೆ. ಕಳೆದ ತಿಂಗಳು ನಡೆದಿದ್ದ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ ತಂಡ 15 ರನ್‌ಗಳಿಂದ ಗೆಲುವು ದಾಖಲಿಸಿತ್ತು. ಆ ಗೆಲುವು ಈಗ ಸನ್‌ರೈಸರ್ಸ್‌ಗೆ ಸ್ಫೂರ್ತಿಯಾಗಿದ್ದರೆ, ಡೆಲ್ಲಿ ತಂಡ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.

ಟೀಮ್ ನ್ಯೂಸ್:

ಸನ್‌ರೈಸರ್ಸ್‌: 127 ರನ್ ಸವಾಲು ಬೆನ್ನಟ್ಟಲಾಗದೆ ಸೋತ ಬಳಿಕ ತಂಡದ ಮಧ್ಯಮ ಕ್ರಮಾಂಕದ ದೌರ್ಬಲ್ಯ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಆಲ್ರೌಂಡರ್ ಜೇಸನ್ ಹೋಲ್ಡರ್ ಬೌಲಿಂಗ್‌ಗೆ ಬಲ ತುಂಬಿದ್ದರೂ, ಬ್ಯಾಟಿಂಗ್‌ನಲ್ಲಿ ಲಾಭ ತಂದಿಲ್ಲ. ಅಭಿಷೇಕ್ ಶರ್ಮ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 12 ರನ್ ಸೋಲು.

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಷಾ ಜಾಗಕ್ಕೆ ಅಜಿಂಕ್ಯ ರಹಾನೆ ಅವರನ್ನು ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗಾಯದಿಂದ ಮರಳಿದ ಬಳಿಕ ರಿಷಭ್ ಪಂತ್ ಾರ್ಮ್ ಕೂಡ ಉತ್ತಮವಾಗಿಲ್ಲ. ಬ್ಯಾಟಿಂಗ್ ವಿಭಾಗ ಬಲ ಪಡಿಸಲು ಹೆಚ್ಚುವರಿ ಬ್ಯಾಟ್ಸ್‌ಮನ್ ಬಂದರೂ ಅಚ್ಚರಿ ಇಲ್ಲ. ದುಬಾರಿಯಾಗುತ್ತಿರುವ ತುಷಾರ್ ದೇಶಪಾಂಡೆಯೂ ಸ್ಥಾನ ಉಳಿಸಿಕೊಳ್ಳುವುದು ಅನುಮಾನ.

ಕಳೆದ ಪಂದ್ಯ: ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧ 59 ರನ್ ಸೋಲು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

ಮುಖಾಮುಖಿ: 16

ಡೆಲ್ಲಿ ಕ್ಯಾಪಿಟಲ್ಸ್: 6

ಸನ್‌ರೈಸರ್ಸ್‌: 10

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net