ಇಂದು ಡೆಲ್ಲಿ ಕ್ಯಾಪಿಟಲ್ಸ್-ಸಿಎಸ್‌ಕೆ ಕಾದಾಟ

csk and delhi capitals for web
Published on

ಮುಂಬೈ: ದೇಶದ ವಾಣಿಜ್ಯ ರಾಜಧಾನಿಯಲ್ಲಿ ಕರೊನಾ ಎರಡನೇ ಅಲೆಯಿಂದಾಗಿ ವಾರಾಂತ್ಯದ ಲಾಕ್‌ಡೌನ್ ನಡುವೆಯೇ ಚುಟುಕು ಕ್ರಿಕೆಟ್ ಜ್ವರ ಕೂಡ ಶುರುವಾಗುತ್ತಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಈಗಷ್ಟೇ ಸದ್ದು ಮಾಡುತ್ತಿರುವ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಸಾರಥ್ಯದ ಹಾಲಿ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಾಗೂ ಭಾರತ ಕ್ರಿಕೆಟ್‌ನ ಮಾಸ್ಟರ್ ಎನಿಸಿಕೊಂಡಿರುವ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್-14ರ ಎರಡನೇ ಕದನದಲ್ಲಿ ಶನಿವಾರ ಎದುರಾಗಲಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಹಲವು ವಿಶೇಷತೆಗಳನ್ನು ಹೊಂದಿದೆ.

ಹಿಂದಿನ ಆವೃತ್ತಿಯಲ್ಲಿ ಪ್ರಮುಖರ ಅಲಭ್ಯತೆಯಿಂದ ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆಫ್ ಹಂತಕ್ಕೇರಲು ವಿಲವಾಗಿದ್ದ ಸಿಎಸ್‌ಕೆ, ಈ ಬಾರಿ ಸುರೇಶ್ ರೈನಾ ವಾಪಸಾತಿ ಮತ್ತು ಕನ್ನಡಿಗರಾದ ರಾಬಿನ್ ಉತ್ತಪ್ಪ ಮತ್ತು ಕೆ. ಗೌತಮ್ ಸೇರ್ಪಡೆಯಿಂದ ಹೊಸ ಬಲ ಪಡೆದುಕೊಂಡಿದೆ. ಗಾಯಾಳು ಶ್ರೇಯಸ್ ಅಯ್ಯರ್ ಗೈರಿನಲ್ಲಿ ಕೊನೇಕ್ಷಣದಲ್ಲಿ ನಾಯಕರಾಗಿ ಬಡ್ತಿ ಪಡೆದ ರಿಷಭ್ ಪಂತ್, ತಂಡದ ಅನುಭವಿ ಆಟಗಾರರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಉತ್ಸಾಹದಲ್ಲಿದ್ದಾರೆ.

ಸಿಎಸ್‌ಕೆ ಮೊದಲ ತಂಡವಾಗಿ ಅಭ್ಯಾಸ ಆರಂಭಿಸಿತ್ತು. ಕೆಲವೊಂದು ಬದಲಾವಣೆಯೊಂದಿಗೆ ಪ್ರಶಸ್ತಿ ಮರಳಿ ಪಡೆಯುವ ಹಂಬಲದಲ್ಲಿರುವ ಸಿಎಸ್‌ಕೆ ಲೀಗ್ ಆರಂಭಕ್ಕೂ ತಿಂಗಳು ಮೊದಲೇ ತವರು ನೆಲ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿತು. ಮತ್ತೊಂದೆಡೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ನೋವಿಗೆ ತುತ್ತಾಗಿರುವ ಶ್ರೇಯಸ್ ಅಯ್ಯರ್ ಬದಲಿಗೆ ರಿಷಭ್ ಪಂತ್ ತಂಡದ ಸಾರಥ್ಯ ವಹಿಸಿದ್ದಾರೆ. ನೂತನ ನಾಯಕನಾಗಿ ಹೊಸ ಸವಾಲು ಹೆಗಲೇರಿದೆ.

*ಆತ್ಮವಿಶ್ವಾಸದಲ್ಲಿ ಸಿಎಸ್‌ಕೆ

ಅನುಭವಿ ಸುರೇಶ್ ರೈನಾ ಆಗಮನದಿಂದ ಉತ್ಸಾಹದಲ್ಲಿರುವ ಧೋನಿ ಬಳಗ ವಿಶ್ವಾಸದ ಅಲೆಯಲ್ಲಿದೆ. ಮೂರು ಬಾರಿ ಚಾಂಪಿಯನ್ ಸಿಎಸ್‌ಕೆ ತಂಡ ಕಳೆದ ಆವೃತ್ತಿಯಲ್ಲಿ 7ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಅನುಭವಿ ಆಟಗಾರರೇ ತಂಡದ ಆಧಾರವಾಗಿದ್ದಾರೆ. ಅಗ್ರಕ್ರಮಾಂಕದಲ್ಲಿ ಫಾಫ್ ಡು ಪ್ಲೆಸಿಸ್ ಜತೆಗೂಡಿ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ನಿಂಗ್ಸ್ ಆರಂಭಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು, ರೈನಾ, ಧೋನಿ ಬಲ ತುಂಬಲಿದ್ದಾರೆ. ರವೀಂದ್ರ ಜಡೇಜಾ, ಸ್ಯಾಮ್ ಕರ‌್ರನ್, ಮೊಯಿನ್ ಅಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಗಮನಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ದೀಪಕ್ ಚಹರ್, ಶಾರ್ದೂಲ್ ಠಾಕೂರ್, ದುಬಾರಿ ಮೊತ್ತಕ್ಕೆ ಸೇಲಾಗಿರುವ ಕನ್ನಡಿಗ ಕೆ.ಗೌತಮ್ ಬೌಲಿಂಗ್ ವಿಭಾಗದಲ್ಲಿ ಆಸರೆಯಾಗಬಲ್ಲರು.

* ರಿಷಭ್ ಪಂತ್ ಮೇಲೆ ಹೆಚ್ಚಿದ ಒತ್ತಡ

ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದ ಡೆಲ್ಲಿ ಬಲಿಷ್ಠ ಬ್ಯಾಟಿಂಗ್ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಶಿಖರ್ ಧವನ್, ಪೃಥ್ವಿ ಷಾ, ಅಜಿಂಕ್ಯ ರಹಾನೆ, ಸ್ಟೀವನ್ ಸ್ಮಿತ್ ಹಾಗೂ ನಾಯಕ ರಿಷಭ್ ಪಂತ್‌ರಂಥ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಮೊದಲ ಪಂದ್ಯದಲ್ಲಿ ಸ್ಫೋಟಿಸುವ ಇರಾದೆಯಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಧವನ್ (618) ಅತಿಹೆಚ್ಚು ರನ್‌ಪೇರಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಅಲ್ಲದೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಗಮನಾರ್ಹ ನಿರ್ವಹಣೆ ತೋರಿದ್ದರು. ಪೃಥ್ವಿ ಷಾ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ 827 ಪೇರಿಸಿದ್ದರು. ಧವನ್-ಪೃಥ್ವಿ ಷಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಸ್ಟೀವನ್ ಸ್ಮಿತ್, ರಿಷಭ್ ಪಂತ್‌ರಂಥ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಲಿದ್ದಾರೆ. ಅಲ್ಲದೆ, ಮಾರ್ಕಸ್‌ಸ್ಟೋಯಿನಿಸ್, ಶಿಮ್ರೊನ್ ಹೆಟ್ಮೆಯರ್, ಸ್ಯಾಮ್ ಬಿಲ್ಲಿಂಗ್ಸ್ ನಡುವೆ ವಿದೇಶಿ ಕೋಟಾದಡಿ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಪೈಪೋಟಿ ಏರ್ಪಟ್ಟಿದೆ. ಕಗಿಸೊ ರಬಾಡ, ಅನ್ರಿಚ್ ನೋಕಿಯಾ ತಡವಾಗಿ ತಂಡ ಕೂಡಿಕೊಂಡಿದ್ದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾದರೆ, ಅಕ್ಷರ್ ಪಟೇಲ್ ಕೋವಿಡ್-19 ರಿಂದಾಗಿ ಕಣಕ್ಕಿಳಿಯುತ್ತಿಲ್ಲ. ಆರ್.ಅಶ್ವಿನ್, ಇಶಾಂತ್ ಶರ್ಮ, ಅಮಿತ್ ಮಿಶ್ರಾ ಒಳಗೊಂಡ ಬೌಲಿಂಗ್ ಪಡೆ ಎದುರಾಳಿ ತಂಡಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ.

ಸಂಭಾವ್ಯ ತಂಡಗಳು:

ಸಿಎಸ್‌ಕೆ: ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ/ಅಂಬಟಿ ರಾಯುಡು, ಪ್ಲೆಸಿಸ್, ಸುರೇಶ್ ರೈನಾ, ಸ್ಯಾಮ್ ಕರ‌್ರನ್, ಎಂಎಸ್ ಧೋನಿ (ನಾಯಕ, ವಿಕೀ), ಮೊಯಿನ್ ಅಲಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಇಮ್ರಾನ್ ತಾಹಿರ್.

ಡೆಲ್ಲಿ: ಶಿಖರ್ ಧವನ್, ಪೃಥ್ವಿ ಷಾ, ಸ್ಟೀವನ್ ಸ್ಮಿತ್, ರಿಷಭ್ ಪಂತ್ (ನಾಯಕ, ವಿಕೀ), ಮಾರ್ಕಸ್ ಸ್ಟೋಯಿನಿಸ್, ಶಿಮ್ರೋನ್ ಹೆಟ್ಮೆಯರ್, ಕ್ರಿಸ್ ವೋಕ್ಸ್/ಟಾಮ್ ಕರ‌್ರನ್, ಆರ್.ಅಶ್ವಿನ್, ಅಮಿತ್ ಮಿಶ್ರಾ, ಉಮೇಶ್ ಯಾದವ್, ಇಶಾಂತ್ ಶರ್ಮ.

ಪಿಚ್ ರಿಪೋರ್ಟ್:

ವಾಂಖೆಡೆ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್‌ಹೊಳೆ ನಿರೀಕ್ಷಿಸಬಹುದು. 180 ರನ್ ಪೇರಿಸಿದರೂ ಚೇಸಿಂಗ್ ಮಾಡುವ ಅವಕಾಶವಿದೆ.

‘ತಂಡದ ಸಂಯೋಜನೆಗಾಗಿ ಶಿಖರ್ ಧವನ್, ಅಜಿಂಕ್ಯ ರಹಾನೆ, ಆರ್.ಅಶ್ವಿನ್‌ರಂಥ ಹಿರಿಯ ಆಟಗಾರರಿಂದ ಮೈದಾನದಲ್ಲೇ ಅಗತ್ಯ ಸಲಹೆ ಪಡೆದುಕೊಳ್ಳುವೆ. ನಾಯಕತ್ವದಿಂದ ಯಾವುದೇ ಒತ್ತಡವಿಲ್ಲ. ಮೈದಾನದಲ್ಲಿ ನಾನೊಬ್ಬ ಸಾಮಾನ್ಯ ಆಟಗಾರನಾಗಿಯೇ ಇರಲು ಬಯಸುವೆ. ನಾಯಕನಾಗಿ ಮೊದಲ ಬಾರಿಗೆ ಸಿಎಸ್‌ಕೆ ತಂಡ ಎದುರಿಸುತ್ತಿದ್ದು, ಬಲಿಷ್ಠ ತಂಡದ ಸವಾಲು ಎದುರಿಸುವ ಸಲುವಾಗಿ ಕೋಚ್ ರಿಕಿ ಪಾಂಟಿಂಗ್, ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿರುವೆ’

- ರಿಷಭ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ

ಮುಖಾಮುಖಿ: 23

ಸಿಎಸ್‌ಕೆ: 15

ಡೆಲ್ಲಿ: 8

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net