ಡೆಲ್ಲಿಗೆ ಶರಣಾದ ಮುಂಬೈ ಇಂಡಿಯನ್ಸ್ ; ಅನಿಶ್ಚಿತತೆಯಲ್ಲಿ ಹಾಲಿ ಚಾಂಪಿಯನ್ ಭವಿಷ್ಯ

mumbai and delhi match for web
Published on

ಶಾರ್ಜಾ: ಗೆಲುವಿಗಾಗಿ ಕಡೇ ಹಂತದವರೆಗೂ ಹೋರಾಡಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 4 ವಿಕೆಟ್‌ಗಳಿಂದ ಶರಣಾಯಿತು. ಪ್ಲೇಆಫ್ ಹಂತಕ್ಕೇರಲು ಪ್ರಮುಖವಾಗಿದ್ದ ಹಣಾಹಣಿಯಲ್ಲಿ ನಿರಾಸೆ ಅನುಭವಿಸಿದ ರೋಹಿತ್ ಶರ್ಮ ಬಳಗದ ಮುಂದಿನ ಹಾದಿ ಮತ್ತಷ್ಟು ಕಠಿಣಗೊಂಡಿತು. ಲೀಗ್‌ನಲ್ಲಿ 7ನೇ ಸೋಲು ಕಂಡ ಮುಂಬೈ ತಂಡದ ಪ್ಲೇಆಫ್ ಹಾದಿ ಅನಿಶ್ಚಿತತೆಯಲ್ಲಿ ಮುಳಿಗಿತು. ಎರಡನೇ ತಂಡವಾಗಿ ಪ್ಲೇಆಫ್ ಖಾತ್ರಿಯೊಂದಿಗೆ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಹಳಿಗೇರುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿತು. ಇದರಿಂದ ಪ್ರಸಕ್ತ ಲೀಗ್‌ನಲ್ಲಿ ಡೆಲ್ಲಿ ಎರಡೂ ಮುಖಾಮುಖಿಯಲ್ಲೂ ಮುಂಬೈ ತಂಡವನ್ನು ಮಣಿಸಿತು.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಮುಂಬೈ ತಂಡ, ವೇಗಿ ಆವೇಶ್ ಖಾನ್ (15ಕ್ಕೆ 3) ಹಾಗೂ ಸ್ಪಿನ್ನರ್ ಅಕ್ಷರ್ ಪಟೇಲ್ (21ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 8 ವಿಕೆಟ್‌ಗೆ 129 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಸುಲಭ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಘಟಿತ ದಾಳಿ ನಡುವೆಯೂ ಶ್ರೇಯಸ್ ಅಯ್ಯರ್ (33*ರನ್, 33 ಎಸೆತ, 2 ಬೌಂಡರಿ) ಹಾಗೂ ಆರ್.ಅಶ್ವಿನ್ (20*ರನ್, 21 ಎಸೆತ, 1 ಸಿಕ್ಸರ್) ಜವಾಬ್ದಾರಿಯುತ ನಿರ್ವಹಣೆ ಫಲವಾಗಿ 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 132 ರನ್‌ಗಳಿಸಿ ಜಯದ ನಗೆ ಬೀರಿತು.

ಮುಂಬೈ ಇಂಡಿಯನ್ಸ್: 8 ವಿಕೆಟ್‌ಗೆ 129 (ರೋಹಿತ್ ಶರ್ಮ 7,ಡಿಕಾಕ್ 19, ಸೂರ್ಯಕುಮಾರ್ ಯಾದವ್ 33, ಸೌರಭ್ ತಿವಾರಿ 15, ಆವೇಶ್ ಖಾನ್ 15ಕ್ಕೆ 3, ಅಕ್ಷರ್ ಪಟೇಲ್ 21ಕ್ಕೆ 3), ಡೆಲ್ಲಿ ಕ್ಯಾಪಿಟಲ್ಸ್ : 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 132 (ಶಿಖರ್ ಧವನ್ 8, ರಿಷಭ್ ಪಂತ್ 26, ಶ್ರೇಯಸ್ ಅಯ್ಯರ್ 33*, ಶಿಮ್ರೋನ್ ಹೆಟ್ಮೆಯರ್ 15, ಆರ್.ಅಶ್ವಿನ್ 20*, ಟ್ರೆಂಟ್ ಬೌಲ್ಟ್ 24ಕ್ಕೆ 1, ಜಯಂತ್ ಯಾದವ್ 31ಕ್ಕೆ 1, ಕೃನಾಲ್ ಪಾಂಡ್ಯ 18ಕ್ಕೆ 1, ಜಸ್‌ಪ್ರೀತ್ ಬುಮ್ರಾ 29ಕ್ಕೆ 1, ನಾಥನ್ ಕೌಲ್ಟರ್ ನಿಲ್ 19ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net