

ಅಬುಧಾಬಿ: ಸಂಘಟನಾತ್ಮಕ ನಿರ್ವಹಣೆ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಸತತ ಎರಡನೇ ಜಯ ದಾಖಲಿಸಿತು. ಈ ಮೂಲಕ ಲೀಗ್‌ನಲ್ಲಿ 8ನೇ ಜಯ ದಾಖಲಿಸಿದ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಬಹುತೇಕ ಪ್ಲೇಆಫ್ ಖಾತ್ರಿ ಪಡಿಸಿಕೊಂಡಿತು. ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 33 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತು. ಮತ್ತೊಂದೆಡೆ, ಲೀಗ್‌ನಲ್ಲಿ ಆಡಿದ 9ನೇ ಪಂದ್ಯದಲ್ಲಿ 5ನೇ ಸೋಲು ಕಂಡ ರಾಜಸ್ಥಾನ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣಗೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಶ್ರೇಯಸ್ ಅಯ್ಯರ್ (43ರನ್, 32 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ಶಿಮ್ರೋನ್ ಹೆಟ್ಮೆಯರ್ (28ರನ್, 16 ಎಸೆತ, 5 ಬೌಂಡರಿ) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್‌ಗೆ 154 ರನ್ ಪೇರಿಸಿತು. ಬಳಿಕ ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ, ನಾಯಕ ಸಂಜು ಸ್ಯಾಮ್ಸನ್ (70*ರನ್, 53 ಎಸೆತ, 8 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 6 ವಿಕೆಟ್‌ಗೆ 121 ರನ್‌ಗಳಿಸಲಷ್ಟೇ ಶಕ್ತವಾಯಿತು.
ಡೆಲ್ಲಿ ಕ್ಯಾಪಿಟಲ್ಸ್: 6 ವಿಕೆಟ್‌ಗೆ 154 (ಶ್ರೇಯಸ್ ಅಯ್ಯರ್ 43, ರಿಷಭ್ ಪಂತ್ 24, ಶಿಮ್ರೋನ್ ಹೆಟ್ಮೆಯರ್ 28, ಲಲಿತ್ ಯಾದವ್ 14*, ಮುಸ್ತಾಫಿಜರ್ ರೆಹಮಾನ್ 22ಕ್ಕೆ 2, ಚೇತನ್ ಸಕಾರಿಯ 33ಕ್ಕೆ 2, ಕಾರ್ತಿಕ್ ತ್ಯಾಗಿ 40ಕ್ಕೆ 1, ರಾಹುಲ್ ತೆವಾಟಿಯಾ 17ಕ್ಕೆ 1). ರಾಜಸ್ಥಾನ ರಾಯಲ್ಸ್ : 6 ವಿಕೆಟ್‌ಗೆ 121 (ಸಂಜು ಸ್ಯಾಮ್ಸನ್ 70*, ಮಹಿಪಾಲ್ ಲೊಮ್ರೊರ್ 19, ಅನ್ರಿಚ್ ನೋಕಿಯಾ 18ಕ್ಕೆ 2, ಅವೇಶ್ ಖಾನ್ 29ಕ್ಕೆ 1, ಆರ್.ಅಶ್ವಿನ್ 20ಕ್ಕೆ 1).