ಚೆಪಾಕ್‌ನಲ್ಲಿ ಇಂದು ಸಿಎಸ್‌ಕೆಗೆ ಕೆಕೆಆರ್ ಸವಾಲು

New-Project-1-4
Published on

ಚೆನ್ನೈ: ಸತತ 3 ಗೆಲುವಿನೊಂದಿಗೆ ಬೀಗುತ್ತಿರುವ ಮಾಜಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ತವರಿನಾಚೆ ಆಡಿದ 2 ಪಂದ್ಯಗಳಲ್ಲೂ ಸೋಲುಂಡಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಐಪಿಎಲ್-17ರಲ್ಲಿ ಸೋಮವಾರ ಮುಖಾಮುಖಿಯಾಗಲಿವೆ. ಋತುರಾಜ್ ಗಾಯಕ್ವಾಡ್ ಪಡೆ ತವರಿನ ಚೆಪಾಕ್ ಅಂಗಣದಲ್ಲಿ ಪುಟಿದೇಳುವ ಹಂಬಲದಲ್ಲಿದ್ದರೆ, ಶ್ರೇಯಸ್ ಅಯ್ಯರ್ ಬಳಗ ಅಜೇಯ ಓಟ ಮುಂದುವರಿಸುವ ತವಕದಲ್ಲಿದೆ. ಸಿಎಸ್‌ಕೆ ತಂಡ ಆಡಿರುವ 4 ಪಂದ್ಯಗಳಲ್ಲಿ 2 ಸೋಲು, 2 ಗೆಲುವಿನೊಂದಿಗೆ 4 ಅಂಕ ಕಲೆಹಾಕಿದೆ. ಹ್ಯಾಟ್ರಿಕ್ ಜಯ ಗಳಿಸಿರುವ ಕೆಕೆಆರ್ ಉತ್ತಮ ಲಯದಲ್ಲಿದ್ದು, ೇವರಿಟ್ ಆಗಿ ಕಣಕ್ಕಿಳಿಯಲಿದೆ. ಹಿಂದಿನ ಮುಖಾಮುಖಿಯಲ್ಲಿ ಸಿಎಸ್‌ಕೆ, ಕೆಕೆಆರ್ ಎದುರು ಪ್ರಾಬಲ್ಯ ಸಾಧಿಸಿದ್ದು, ತವರಿನ ಅಂಗಣದಲ್ಲಿ ಉತ್ತಮ ದಾಖಲೆಯನ್ನೂ ಹೊಂದಿದೆ.

ಬಲಿಷ್ಠ ಬ್ಯಾಟಿಂಗ್ ವಿಭಾಗ: ಹಾಲಿ ಆವೃತ್ತಿಯಲ್ಲಿ ಕೆಕೆಆರ್ ತಂಡದ ಯಶಸ್ಸಿನಲ್ಲಿ ಬ್ಯಾಟಿಂಗ್ ವಿಭಾಗ ಪ್ರಮುಖ ಪಾತ್ರವಹಿಸಿದೆ. ಸುನೀಲ್ ನಾರಾಯಣ್ ಭರ್ಜರಿ ಾರ್ಮ್‌ನಲ್ಲಿದ್ದು, ಬಿರುಸಿನ ಆರಂಭ ಒದಗಿಸಲಿದ್ದಾರೆ. ಫಿಲ್ ಸಾಲ್ಟ್ ಸಹ ಉತ್ತಮ ಸಾಥ್ ನೀಡಿದ್ದಾರೆ. ನಿತೀಶ್ ರಾಣಾ ಅನುಪಸ್ಥಿತಿಯಲ್ಲಿ ಯುವ ಬ್ಯಾಟರ್ ಅಂಗಕ್ರಿಶ್ ರಘುವಂಶಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಆಂಡ್ರೆ ರಸೆಲ್, ರಿಂಕು ಸಿಂಗ್ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ್ದು, ನಾಯಕ ಶ್ರೇಯಸ್ ಅಯ್ಯರ್ ಾರ್ಮ್‌ಗೆ ಮರಳಿದರೆ ಚೆಪಾಕ್‌ನಲ್ಲಿ ರನ್‌ಮಳೆ ಹರಿಯುವ ಸಾಧ್ಯತೆಗಳಿವೆ. ಬೌಲಿಂಗ್‌ನಲ್ಲಿ ಯುವ ವೇಗಿಗಳಾದ ಹರ್ಷಿತ್ ರಾಣಾ, ವೈಭವ್ ಆರೋರಾ ತಂಡಕ್ಕೆ ಆಸರೆಯಾಗಿದ್ದಾರೆ. ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಹಿಂದಿನ ಪಂದ್ಯದಲ್ಲಿ ಲಯಕ್ಕೆ ಮರಳಿರುವುದು ಪ್ಲಸ್ ಪಾಯಿಂಟ್.

ಸಿಎಸ್‌ಕೆಗೆ ತವರಿನ ಬಲ: ಚೆಪಾಕ್ ಅಂಗಣದಲ್ಲಿ ಉತ್ತಮ ದಾಖಲೆ ಹೊಂದಿರುವ ಸಿಎಸ್‌ಕೆ ಹ್ಯಾಟ್ರಿಕ್ ಸೋಲಿನಿಂದ ಪಾರಾಗುವ ನಿರೀಕ್ಷೆಯಲ್ಲಿದೆ. ಋತುರಾಜ್ ಗಾಯಕ್ವಾಡ್-ರಚಿನ್ ರವೀಂದ್ರ ಮೊದಲ ಪಂದ್ಯದ ಬಳಿಕ ಉತ್ತಮ ಆರಂಭ ಒದಗಿಸುವಲ್ಲಿ ವಿಲವಾಗಿದ್ದು ತಂಡಕ್ಕೆ ಹಿನ್ನಡೆ ತಂದಿದೆ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಅವರನ್ನು ಸಿಎಸ್‌ಕೆ ನೆಚ್ಚಿಕೊಂಡಿದೆ. ದುಬೆ ಇದುವರೆಗೆ 148 ರನ್‌ಗಳಿಸಿದ್ದು, ಇತರ ಬ್ಯಾಟರ್‌ಗಳ ಬೆಂಬಲ ಬೇಕಿದೆ. ಮುಸ್ತಾಫಿಜುರ್ ರೆಹಮಾನ್ ಗೈರು ಕಾಡಲಿದೆ. ಮಥೀಶ ಪಥಿರಣ ಗಾಯದ ಸಮಸ್ಯೆಯಿಂದ ಆಡುವುದು ಅನುಮಾನ ಎನಿಸಿದೆ. ಮುಸ್ತಾಫಿಜುರ್-ಪಥಿರಣ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡವನ್ನು ಕಟ್ಟಿಹಾಕುವುದು ಸಿಎಸ್‌ಕೆಗೆ ಸವಾಲೆನಿಸಿದೆ. ಆದರೆ ಹಿಂದಿನ 5 ಮುಖಾಮುಖಿಯಲ್ಲಿ 5 ಬಾರಿ ಗೆಲುವು ದಾಖಲಿಸಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ.

ಮುಖಾಮುಖಿ: 29

ಸಿಎಸ್‌ಕೆ: 18

ಕೆಕೆಆರ್: 10

ರದ್ದು: 1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net