

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆರಂಭಿಕ ಎಸ್ಯು ಕಾರ್ತಿಕ್ (53 ರನ್, 43 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕ ಮತ್ತು ಕೆ. ಗೌತಮ್ (29ಕ್ಕೆ 3) ಬಿಗಿ ಬೌಲಿಂಗ್ ಬಲದಿಂದ ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 2ನೇ ಸೆಮಿೈನಲ್ನಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 9 ರನ್ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಆವೃತ್ತಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡ ಕರುಣ್ ನಾಯರ್ ಪಡೆ, ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಪ್ರಶಸ್ತಿಗಾಗಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಹೋರಾಡಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಣಸಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಮೈಸೂರು ಆರಂಭಿಕ ಆಘಾತದ ನಡುವೆ 8 ವಿಕೆಟ್ಗೆ 177 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಹುಬ್ಬಳ್ಳಿ ತಂಡ 5 ವಿಕೆಟ್ಗೆ 168 ರನ್ ಗಳಿಸಲಷ್ಟೇ ಶಕ್ತವಾಯಿತು. ಕಾರ್ತಿಕೇಯ ಕೆಪಿ (61*ರನ್, 39 ಎಸೆತ, 4 ಬೌಂಡರಿ, 3 ಸಿಕ್ಸರ್), ಮನ್ವಂತ್ ಕುಮಾರ್ (21*) ಹೋರಾಟದ ನಡುವೆ ಮನೀಷ್ ಪಾಂಡೆ ಪಡೆ ಸತತ 2ನೇ ಬಾರಿ ಫೈನಲ್ಗೇರಲು ವಿಫಲವಾಯಿತು.
ಮೈಸೂರಿಗೆ ಕಾರ್ತಿಕ್ ಆಸರೆ
ಕಳೆದ ವರ್ಷದ ೈನಲ್ ಪಂದ್ಯದ ಪುನರಾವರ್ತನೆ ಎನಿಸಿದ್ದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಆರಂಭಿಕ ಆಘಾತ ಕಂಡಿತು. ಸಿಎ ಕಾರ್ತಿಕ್ (6) ವಿದ್ವತ್ ಕಾವೇರಪ್ಪ ಎಸೆತದಲ್ಲಿ ಮನ್ವಂತ್ಗೆ ಕ್ಯಾಚ್ ನೀಡಿದರೆ, ನಾಯಕ ಕರುಣ್ ನಾಯರ್ (2) ನಿರಾಸೆ ಮೂಡಿಸಿದರು. ಆಗ ಎಸ್ಯು ಕಾರ್ತಿಕ್ ಜತೆಯಾದ ಎಸ್. ಶರತ್ (26) ಚೇತರಿಕೆ ನೀಡಿದರು. ನಂತರ ಸುಮಿತ್ ಕುಮಾರ್ (18) ಉಪಯುಕ್ತ ರನ್ ಕಲೆಹಾಕಿದರು. ಯುವ ಆಲ್ರೌಂಡರ್ ಮನೋಜ್ ಭಾಂಡಗೆ (26) ಸ್ಲಾಗ್ ಓವರ್ಗಳಲ್ಲಿ ಬಿರುಸಿನ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದರು.
ಭಾನುವಾರ ಫೈನಲ್
ಮಹಾರಾಜ ಟ್ರೋಫಿ ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಲೀಗ್ ಹಂತದ ಅಗ್ರಸ್ಥಾನಿ ಮಯಾಂಕ್ ಅಗರ್ವಾಲ್ ಸಾರಥ್ಯದ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮೈಸೂರು ವಾರಿಯರ್ಸ್ ಎದುರಿಸಲಿದೆ. ಎದುರಿಸಲಿದೆ. ಈ ಬಾರಿ ಹೊಸ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ. 2022ರ ಮೊದಲ ಆವೃತ್ತಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಪ್ರಶಸ್ತಿ ಜಯಿಸಿತ್ತು. ಮೈಸೂರು ವಾರಿಯರ್ಸ್ ತಂಡ ಈ ಮುನ್ನ 2014ರ ಕೆಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತ್ತು.
ಮೈಸೂರು ವಾರಿಯರ್ಸ್: 8 ವಿಕೆಟ್ಗೆ 177 (ಎಸ್ಯು ಕಾರ್ತಿಕ್ 53, ಸಿಎ ಕಾರ್ತಿಕ್ 6, ಕರುಣ್ ನಾಯರ್ 4, ಶ್ರೀನಿವಾಸ್ ಶರತ್ 26, ಸುಮಿತ್ 18, ಮನೋಜ್ ಭಾಂಡಗೆ 26, ಜೆ.ಸುಚಿತ್ 0, ಹರ್ಷಿಲ್ 14, ಕೆ.ಗೌತಮ್ 10*, ವಿಧ್ಯಾದರ್ 11*, ಎಲ್ಆರ್ ಕುಮಾರ್ 37ಕ್ಕೆ 3, ವಿದ್ವತ್ ಕಾವೇರಪ್ಪ 40ಕ್ಕೆ 2). ಹುಬ್ಬಳ್ಳಿ ಟೈಗರ್ಸ್: 5 ವಿಕೆಟ್ಗೆ 168 (ತಿಪ್ಪಾರೆಡ್ಡಿ 33, ತಾಹ 8, ಶ್ರೀಜಿತ್ 20, ಅನೀಶ್ವರ್ 6, ಮನೀಷ್ 6, ಕಾರ್ತಿಕೇಯ 61*, ಮನ್ವಂತ್ 21*, ಕೆ. ಗೌತಮ್ 29ಕ್ಕೆ 3).