ಡಬ್ಲ್ಯುಪಿಎಲ್​ನಲ್ಲಿ ದೀಪ್ತಿ ಶರ್ಮ ಮ್ಯಾಜಿಕ್; ಗೆಲುವು ಕೈಚೆಲ್ಲಿ ಒಂದು ರನ್​ನಿಂದ ಸೋತ ಡೆಲ್ಲಿ!

wpl dc vs up web
Published on

ನವದೆಹಲಿ: ದೀಪ್ತಿ ಶರ್ಮ (59 ರನ್​, 48 ಎಸೆತ, 6 ಬೌಂಡರಿ, 1 ಸಿಕ್ಸರ್​, 19ಕ್ಕೆ 4 ವಿಕೆಟ್​) ಆಲ್ರೌಂಡ್​ ಹೋರಾಟದ ಬಲದಿಂದ ಯುಪಿ ವಾರಿಯರ್ಸ್​ ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ 2ನೇ ಆವೃತ್ತಿಯಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್​ ಎದುರು 1 ರನ್​ನಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಯುಪಿ ತಂಡ ಪ್ಲೇಆಫ್​ ಆಸೆಯನ್ನು ಜೀವಂತ ಉಳಿಸಿಕೊಂಡಿದೆ.

ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಯುಪಿ ವಾರಿಯರ್ಸ್​, 8 ವಿಕೆಟ್​ಗೆ 138 ರನ್​ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ ನಾಯಕ ಮೆಗ್​ ಲ್ಯಾನಿಂಗ್​ (60ರನ್​, 46 ಎಸೆತ, 12 ಬೌಂಡರಿ) ಆಸರೆಯಲ್ಲಿ ಗೆಲುವಿನತ್ತ ಮುನ್ನಡೆಯಿತು. ಆದರೆ ಡೆಲ್ಲಿಗೆ ಕೊನೇ 2 ಓವರ್​ಗಳಲ್ಲಿ 15 ರನ್​ ಬೇಕಿದ್ದಾಗ ದೀಪ್ತಿ ಶರ್ಮ ಒಂದೇ ಓವರ್​ನಲ್ಲಿ 4 ಎಸೆತಗಳಲ್ಲಿ 3 ವಿಕೆಟ್​ ಕಬಳಿಸಿ ಪಂದ್ಯಕ್ಕೆ ತಿರುವು ನೀಡಿದರು. ಕೊನೇ ಓವರ್​ನಲ್ಲಿ 10 ರನ್​ ಬೇಕಿದ್ದಾಗ ಗ್ರೇಸ್​ ಹ್ಯಾರಿಸ್​ ಮೊದಲ ಎಸೆತದಲ್ಲೇ ಸಿಕ್ಸರ್​ ಸಿಡಿಸಿ, 2ನೇ ಎಸೆತದಲ್ಲಿ 2 ರನ್​ ಕಸಿದರು. ಕೊನೇ 4 ಎಸೆತಗಳಲ್ಲಿ 2 ರನ್​ ಬೇಕಿದ್ದಾಗ ಸತತ 3 ಎಸೆತಗಳಲ್ಲಿ 3 ವಿಕೆಟ್​ ಕಳೆದುಕೊಂಡ ಡೆಲ್ಲಿ 19.5 ಓವರ್​ಗಳಲ್ಲಿ 137 ರನ್​ಗಳಿಗೆ ಆಲೌಟ್​ ಆಗಿ ಸೋಲುಂಡಿತು.

ಡೆಲ್ಲಿ ಬಿಗಿ ಬೌಲಿಂಗ್​: ಡೆಲ್ಲಿಗೆ ಸವಾಲಿನ ಗುರಿ ನೀಡುವ ನಿರೀೆಯೊಂದಿಗೆ ಕಣಕ್ಕಿಳಿದ ಯುಪಿ ಆರಂಭಿಕ ಆಘಾತ ಎದುರಿಸಿತು. ಕಿರಣ್​ ನವಗಿರೆ (5) ನಿರಾಸೆ ಮೂಡಿಸಿದರು. ಬಡ್ತಿ ಪಡೆದು 3ನೇ ಕ್ರಮಾಂಕದಲ್ಲಿ ಆಡಿದ ದೀಪ್ತಿ ಶರ್ಮ, ನಾಯಕಿ ಆಲಿಸ್ಸಾ ಹೀಲಿ (29) ಜತೆಯಾಗಿ ಚೇತರಿಕೆ ನೀಡಿದರು. ಇವರಿಬ್ಬರು 2ನೇ ವಿಕೆಟ್​ಗೆ 45 ಎಸೆತಗಳಲ್ಲಿ 46 ರನ್​ಗಳಿಸಿದರು. ನಂತರ ನಿರಂತರ ವಿಕೆಟ್​ ಕಳೆದುಕೊಂಡ ಯುಪಿ ವಾರಿಯರ್ಸ್​ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆಗ ದೀಪ್ತಿ ಏಕಾಂಗಿ ಹೋರಾಟದ ಮೂಲಕ 45 ಎಸೆತಗಳಲ್ಲಿ ಸತತ 2ನೇ ಅರ್ಧಶತಕ ಪೂರೈಸಿ ತಂಡಕ್ಕೆ ಆಸರೆಯಾದರು. ಕೊನೇ ಐದು ಓವರ್​ನಲ್ಲಿ 37 ರನ್​ ನೀಡಿದ ಡೆಲ್ಲಿ 3 ವಿಕೆಟ್​ ಉರುಳಿಸಿತು.

ಯುಪಿ ವಾರಿಯರ್ಸ್​: 8 ವಿಕೆಟ್​ಗೆ 138 (ಅಲಿಸ್ಸಾ ಹೀಲಿ 29, ಕಿರಣ್​ ನವಗಿರೆ 5, ದೀಪ್ತಿ ಶರ್ಮ 59, ತಾಲಿಹಾ ಮೆಕ್​ಗ್ರಾತ್​ 3, ಗ್ರೇಸ್​ ಹ್ಯಾರಿಸ್​ 13, ಶ್ವೇತಾ ಸೆಹ್ರಾವತ್​ 4, ಪೂನಂ 1, ಎಕ್ಲೆಸ್ಟೋನ್​ 8, ಟಿಟಾಸ್​ ಸಧು 23 ಕ್ಕೆ 2, ರಾಧಾ ಯಾದವ್​ 16ಕ್ಕೆ 2, ಆರುಂಧತಿ ರೆಡ್ಡಿ 15ಕ್ಕೆ 1).

ಡೆಲ್ಲಿ ಕ್ಯಾಪಿಟಲ್ಸ್​: 19.5 ಓವರ್​ಗಳಲ್ಲಿ 137 (ಲ್ಯಾನಿಂಗ್​ 60, ಶೆಫಾಲಿ 15, ಕ್ಯಾಪ್ಸಿ 15, ಜೆಮೀಮಾ 17, ಜೊನಾಸೆನ್​ 11, ದೀಪ್ತಿ ಶರ್ಮ 19ಕ್ಕೆ 4, ಸೈಮಾ 30ಕ್ಕೆ 2, ಗ್ರೇಸ್​ ಹ್ಯಾರಿಸ್​ 8ಕ್ಕೆ 2, ಎಕ್ಲೆಸ್ಟೋನ್​ 15ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net