

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು (ಎನ್ಸಿಎ) ಹೊಸದಾಗಿ ನವೀಕರಿಸುವ ಯೋಜನೆಯ ಭಾಗವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ವೈದ್ಯಕೀಯ ಸಮಿತಿ ಹಾಗು ಸಾಮಾಜಿಕ ಜಾಲತಾಣ ವಿಭಾಗವನ್ನು ರಚಿಸಲು ಮುಂದಾಗಿದೆ. ಆಟಗಾರರ ಇಂಜುರಿ ಮ್ಯಾನೇಜ್ವೆುಂಟ್ನಲ್ಲಿ ಪ್ರತಿ ಬಾರಿಯೂ ಎನ್ಸಿಎ ಟೀಕೆಗೆ ಒಳಗಾಗುತ್ತಿದ್ದು, ಬಿಸಿಸಿಐನ ವೈದ್ಯಕೀಯ ಸಮಿತಿಯ ಸಹಾಯದೊಂದಿಗೆ ಎನ್ಸಿಎಯಲ್ಲಿ ಹೊಸ ಸಮಿತಿ ರಚಿಸುವ ಯೋಜನೆಗೆ ಮುಂದಾಗಿದೆ.
ಎನ್ಸಿಎಯ ಇತ್ತೀಚಿನ ಸಭೆಯಲ್ಲಿ ವೈದ್ಯಕೀಯ ಸಮಿತಿಯ ರಚನೆಯ ಬಗ್ಗೆ ಚರ್ಚೆ ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ರೊಂದಿಗೆ ಬಿಸಿಸಿಐನ ಎಲ್ಲ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಹಾಗೂ ವೇಗಿ ಭುವನೇಶ್ವರ್ ಕುಮಾರ್ ಅವರ ಇಂಜುರಿ ಮ್ಯಾನೇಜ್ವೆುಂಟ್ನಲ್ಲಿ ಎನ್ಸಿಎ ತೀವ್ರ ಮಟ್ಟದ ವೈಫಲ್ಯ ಕಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆ ಕಾರಣದಿಂದಾಗಿ ಹೊಸ ಸಮಿತಿ ರಚನೆಯ ಪ್ರಸ್ತಾಪವನ್ನು ಬಿಸಿಸಿಐ ಮುಂದಿಟ್ಟಿದೆ. ಎನ್ಸಿಎಯಲ್ಲಿನ ಪುನಶ್ಚೇತನ ಶಿಬಿರದ ಬಗ್ಗೆ ವಿಶ್ವಾಸ ಹೊಂದಿಲ್ಲದ ಕಾರಣಕ್ಕಾಗಿ ಗಾಯಾಳುವಾಗಿದ್ದ ಅಗ್ರ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಖಾಸಗಿಯಾಗಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದರು. ಲಂಡನ್ನ ಪ್ರಖ್ಯಾತ ಸ್ಪೋರ್ಟ್ಸ್ ಮೆಡಿಸಿನ್ ಕ್ಲಿನಿಕ್ ಫೋರ್ಟಿಯಸ್ ಜತೆ ಈ ಕುರಿತಾಗಿ ಬಿಸಿಸಿಐ ಮಾತನಾಡಲಿದ್ದು, ಎನ್ಸಿಎಯಲ್ಲಿ ತನ್ನ ಸಮಿತಿಯನ್ನು ರಚಿಸುವ ಬಗ್ಗೆ ಕೇಳಿಕೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರೊಂದಿಗೆ ವೇಗದ ಬೌಲಿಂಗ್ ಕೋಚ್ ಸ್ಥಾನ ಬಹಳ ದೀರ್ಘ ಸಮಯದಿಂದ ಖಾಲಿ ಇದ್ದು, ಇದನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಎನ್ಸಿಎಯಲ್ಲಿ ಅವರು ವೇಗದ ಬೌಲಿಂಗ್ ವಿಭಾಗದ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳಲಿದ್ದಾರೆ. ಅದಲ್ಲದೆ, ಬೆಂಗಳೂರು ಮೂಲಕದ ಕಂಪನಿಯ ಜತೆಗೆ ಕ್ರೀಡಾ ಪೌಷ್ಠಿಕಾಂಶದ ಕುರಿತಾಗಿ ಸೇವೆಯನ್ನು ಪಡೆದುಕೊಳ್ಳಲಿದ್ದೇವೆ ಎಂದು ವಿವರಿಸಿದ್ದಾರೆ. -ಪಿಟಿಐ
ಸಾಮಾಜಿಕ ಜಾಲತಾಣದ ಮ್ಯಾನೇಜರ್
ಎನ್ಸಿಎಯಲ್ಲಾದ ಇತ್ತೀಚಿನ ಬೆಳವಣಿಗೆಗಳು ಅಕಾಡೆಮಿಗೆ ಹಿನ್ನಡೆ ತಂದಿವೆ. ಅದಲ್ಲದೆ, ಎನ್ಸಿಎಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲು ಅಲ್ಲಿ ಯಾವುದೇ ವ್ಯಕ್ತಿಗಳಿಲ್ಲ. ಇದನ್ನು ಅರಿತಿರುವ ಬಿಸಿಸಿಐ, ಎನ್ಸಿಎಯಲ್ಲಿ ಏನಾಗುತ್ತಿದೆ ಎನ್ನುವ ಮಾಹಿತಿಗಳನ್ನು ನೀಡಲು ಸಾಮಾಜಿಕ ಜಾಲತಾಣದ ಮ್ಯಾನೇಜರ್ಅನ್ನು ನೇಮಕ ಮಾಡುವ ಯೋಚನೆ ಮಾಡಿದೆ. ರಾಷ್ಟ್ರೀಯ ತಂಡದ ಆಟಗಾರರ ಕುರಿತಾಗಿ ಹಾಗೂ ಅವರ ಇಂಜುರಿಯ ಕುರಿತಾಗಿ ಇಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ. ಅದರೊಂದಿಗೆ ಡೇಟಾ ಅನಾಲಿಟಿಕ್ಸ್ ಸ್ಥಾನವನ್ನು ಭರ್ತಿ ಮಾಡಲಾಗುತ್ತದೆ.