ಕನ್ನಡತಿ ಶ್ರೇಯಾಂಕಾ, ರಿಚಾ ಘೋಷ್​ ಪರಿಶ್ರಮ ವ್ಯರ್ಥ; ಆರ್​ಸಿಬಿಗೆ 1 ರನ್​ ಸೋಲು, ತೂಗುಯ್ಯಾಲೆಯಲ್ಲಿ ಪ್ಲೇಆಫ್​ ಹಾದಿ...

rcb wpl web
Published on

ನವದೆಹಲಿ: ವಿಕೆಟ್​ ಕೀಪರ್​-ಬ್ಯಾಟರ್​ ರಿಚಾ ಘೋಷ್​ (51 ರನ್​, 29 ಎಸೆತ, 4 ಬೌಂಡರಿ, 3 ಸಿಕ್ಸರ್​) ಕೊನೇ ಎಸೆತದವರೆಗೆ ತೋರಿದ ಹೋರಾಟ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್​ (26ಕ್ಕೆ 4) ಬಿಗಿ ಬೌಲಿಂಗ್​ ದಾಳಿಯ ನಡುವೆಯೂ ಆರ್​ಸಿಬಿ ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ 2ನೇ ಆವೃತ್ತಿಯ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 1 ರನ್​ನಿಂದ ವೀರೋಚಿತ ಸೋಲು ಅನುಭವಿಸಿದೆ. ಟೂರ್ನಿಯ 5ನೇ ಜಯದೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿ ಪ್ಲೇಆಫ್​ ಪ್ರವೇಶ ಖಚಿತಪಡಿಸಿಕೊಂಡಿದ್ದರೆ, ಸ್ಮೃತಿ ಮಂದನಾ ಬಳಗದ ಪ್ಲೇಆಫ್​ ಅವಕಾಶ ತೂಗುಯ್ಯಾಲೆಯಲ್ಲಿ ನಿಂತಿದೆ.

ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ತಂಡ ಜೆಮೀಮಾ ರೋಡ್ರಿಗಸ್​ (58 ರನ್​, 36 ಎಸೆತ, 8 ಬೌಂಡರಿ, 1 ಸಿಕ್ಸರ್​) ಮತ್ತು ಆಲಿಸ್​ ಕ್ಯಾಪ್ಸಿ (48 ರನ್​, 32 ಎಸೆತ, 8 ಬೌಂಡರಿ) ಆಸರೆಯಲ್ಲಿ 5 ವಿಕೆಟ್​ಗೆ 181 ರನ್​ ಪೇರಿಸಿತು. ಪ್ರತಿಯಾಗಿ ಆರ್​ಸಿಬಿ ತಂಡ 7 ವಿಕೆಟ್​ಗೆ 180 ರನ್​ ಗಳಿಸಿ ಸೋಲೊಪ್ಪಿಕೊಂಡಿತು.

ನಾಯಕಿ ಸ್ಮೃತಿ ಮಂದನಾ (5) ವೈಲ್ಯದ ನಡುವೆ ಸೋಫಿ ಮೊಲಿನೆಕ್ಸ್​ (33) ಮತ್ತು ಎಲ್ಲಿಸ್​ ಪೆರ್ರಿ (49) ಆರ್​ಸಿಬಿ ಗೆಲುವಿನ ಆಸೆ ಜೀವಂತವಿಟ್ಟರು. ನಂತರ ರಿಚಾ ಘೋಷ್​ ಬಿರುಸಿನ ಆಟದಿಂದ ಆರ್​ಸಿಬಿ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿತು. ಜೆಸ್​ ಜೊನಾಸೆನ್​ ಎಸೆದ ಪಂದ್ಯದ ಕೊನೇ ಓವರ್​ನಲ್ಲಿ 17 ರನ್​ ಬೇಕಿದ್ದಾಗ ರಿಚಾ 2 ಸಿಕ್ಸರ್​ ಸಿಡಿಸಿದರು. ಆದರೆ ಕೊನೇ ಎಸೆತದಲ್ಲಿ 2 ರನ್​ ಬೇಕಿದ್ದಾಗ ರಿಚಾ ರನೌಟ್​ ಆಗುವುದರೊಂದಿಗೆ ಆರ್​ಸಿಬಿಗೆ ಕನಿಷ್ಠ ಟೈ ಸಾಧಿಸಲು ಕೂಡ ಸಾಧ್ಯವಾಗಲಿಲ್ಲ.

ಡೆಲ್ಲಿಗೆ ಜೆಮೀಮಾ&ಕ್ಯಾಪ್ಸಿ ಆಸರೆ: ನಾಯಕಿ ಮೆಗ್​ ಲ್ಯಾನಿಂಗ್​ (29) ಮತ್ತು ಶೆಾಲಿ ವರ್ಮ (23) ಮೊದಲ ವಿಕೆಟ್​ಗೆ 38 ಎಸೆತಗಳಲ್ಲಿ 54 ರನ್​ ಕಲೆಹಾಕಿದರು. ಬಳಿಕ ಇಬ್ಬರೂ 6 ರನ್​ ಅಂತರದಲ್ಲಿ ಡಗೌಟ್​ಗೆ ಮರಳಿದರು. ಆಗ ಜತೆಗೂಡಿದ ಜೆಮೀಮಾ-ಕ್ಯಾಪ್ಸಿ ಜೋಡಿ 3ನೇ ವಿಕೆಟ್​ಗೆ 62 ಎಸೆತಗಳಲ್ಲಿ 97 ರನ್​ ಸೇರಿಸಿ ಡೆಲ್ಲಿ ತಂಡವನ್ನು ಬೃಹತ್​ ಮೊತ್ತದತ್ತ ಮುನ್ನಡೆಸಿತು. ಇನಿಂಗ್ಸ್​ನ ಕೊನೆಯಲ್ಲಿ ಶ್ರೇಯಾಂಕಾ 6 ಎಸೆತಗಳ ಅಂತರದಲ್ಲಿ 3 ವಿಕೆಟ್​ ಕಬಳಿಸಿ ಡೆಲ್ಲಿ ರನ್​ಗತಿಗೆ ಕಡಿವಾಣ ಹಾಕಿದರು. ಈ ನಡುವೆ ಸೋಫಿ ಮೊಲಿನೆಕ್ಸ್​ ಎಸೆದ ಇನಿಂಗ್ಸ್​ನ 19ನೇ ಓವರ್​ನಲ್ಲಿ ಡೆಲ್ಲಿ ತಂಡ 18 ರನ್​ ಕಸಿಯಿತು. ಆಶಾ ಶೋಭನಾ 29 ರನ್​ಗಳಿಗೆ 1 ವಿಕೆಟ್​ ಕಬಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್​: 5 ವಿಕೆಟ್​ಗೆ 181 (ಲ್ಯಾನಿಂಗ್​ 29, ಶೆಫಾಲಿ 23, ಜೆಮೀಮಾ 58, ಆಲಿಸ್​ ಕ್ಯಾಪ್ಸಿ 48, ಕಾಪ್​ 12*, ಶ್ರೇಯಾಂಕಾ 26ಕ್ಕೆ 4). ಆರ್​ಸಿಬಿ: 7 ವಿಕೆಟ್​ಗೆ 180 (ಸ್ಮೃತಿ 5, ಮೊಲಿನೆಕ್ಸ್​ 33, ಎಲ್ಲಿಸ್​ ಪೆರ್ರಿ 49, ಡಿವೈನ್​ 26, ರಿಚಾ 51, ಕಾಪ್​ 30ಕ್ಕೆ 1, ಕ್ಯಾಪ್ಸಿ 5ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net