IPL-2025: ಮಾಜಿ ತಂಡದ ಎದುರು ಗರ್ಜಿಸಿದ ಕನ್ನಡಿಗ ಕೆಎಲ್ ರಾಹುಲ್; ಡೆಲ್ಲಿಗೆ ಶರಣಾದ ಲಖನೌ

web dc
Published on

ಲಖನೌ: ವೇಗಿ ಮುಕೇಶ್​ ಕುಮಾರ್​ (33ಕ್ಕೆ 4) ಮಾರಕ ದಾಳಿ ಮತ್ತು ಯುವ ಎಡಗೈ ಆರಂಭಿಕ ಅಭಿಷೇಕ್​ ಪೊರೆಲ್​ (51 ರನ್​, 36 ಎಸೆತ, 5 ಬೌಂಡರಿ, 1 ಸಿಕ್ಸರ್​), ಕನ್ನಡಿಗ ಕೆಎಲ್​ ರಾಹುಲ್​ (57*ರನ್​, 43 ಎಸೆತ, 3 ಬೌಂಡರಿ, 3 ಸಿಕ್ಸರ್​) ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಐಪಿಎಲ್​ 18ನೇ ಆವೃತ್ತಿಯಲ್ಲಿ ಆರನೇ ಗೆಲುವಿನ ಸಂಭ್ರಮ ಕಂಡಿದೆ. ಲಖನೌ ಸೂಪರ್​ಜೈಂಟ್ಸ್​ ವಿರುದ್ಧದ ತನ್ನ 8ನೇ ಲೀಗ್​ ಪಂದ್ಯದಲ್ಲಿ ಡೆಲ್ಲಿ 8 ವಿಕೆಟ್​ಗಳಿಂದ ಸುಲಭ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಭದ್ರಪಡಿಸಿಕೊಂಡಿತು. ಲಖನೌ ತಂಡ ಟೂರ್ನಿಯಲ್ಲಿ ಡೆಲ್ಲಿ ವಿರುದ್ಧದ ಎರಡೂ ಲೀಗ್​ ಪಂದ್ಯಗಳಲ್ಲಿ ಸೋಲಿನ ನಿರಾಸೆ ಅನುಭವಿಸಿತು. ತನ್ನ ಮಾಜಿ ತಂಡದ ಎದುರು ಗೆಲುವಿನ ಆಟವಾಡುವ ಮೂಲಕ ರಾಹುಲ್​ ಗಮನಸೆಳೆದರು.

ಏಕನಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಟೂರ್ನಿಯ 40ನೇ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಲಖನೌ ಏಡನ್​ ಮಾರ್ಕ್ರಮ್​ (52 ರನ್​, 33 ಎಸೆತ, 2 ಬೌಂಡರಿ, 3 ಸಿಕ್ಸರ್​) ಅರ್ಧಶತಕದಾಟದ ಬಲದಿಂದ ಮೊದಲ 10 ಓವರ್​ಗಳಲ್ಲಿ ದಿಟ್ಟ ಬ್ಯಾಟಿಂಗ್​ ಪ್ರದರ್ಶಿಸಿತು. ನಂತರದ 10 ಓವರ್​ಗಳಲ್ಲಿ ಮುಕೇಶ್​ ದಾಳಿಗೆ ನಲುಗಿತು. ಅಂತಿಮವಾಗಿ 6 ವಿಕೆಟ್​ಗೆ 159 ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ತೃಪ್ತಿಪಟ್ಟಿತು. ಇದು ಟೂರ್ನಿಯಲ್ಲಿ ಆಡಿದ ಇದುವರೆಗಿನ ಪಂದ್ಯಗಳಲ್ಲಿ ಲಖನೌ ತಂಡದ ಕನಿಷ್ಠ ಮೊತ್ತವಾಗಿದೆ. ಕೊನೇ 5 ಓವರ್​ಗಳಲ್ಲಿ ಲಖನೌ 41 ರನ್​ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಡೆಲ್ಲಿ ತಂಡ ನಿರಾಯಾಸವಾಗಿ ಚೇಸಿಂಗ್​ ಮಾಡುವ ಮೂಲಕ 17.5 ಓವರ್​ಗಳಲ್ಲಿ 2 ವಿಕೆಟ್​ಗೆ 161 ರನ್​ ಗಳಿಸಿ ಜಯಭೇರಿ ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net