ಭಾರತಕ್ಕೆ ಇಂದು-ನಾಳೆ ಬಲಿಷ್ಠ ಕ್ರೊವೇಷಿಯಾ ಸವಾಲು

deves cup mar 20
Published on

ಜಾಗ್ರೆಬ್: ಸುಮಿತ್ ನಗಾಲ್, ಪ್ರಜ್ಞೇಶ್ ಗುಣೇಶ್ವರನ್​ರಂಥ ಪ್ರಮುಖ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಡೇವಿಸ್ ಕಪ್ ಟೀಮ್ ಟೆನಿಸ್ ಟೂರ್ನಿಯ ಕ್ವಾಲಿಫೈಯರ್ಸ್​ನಲ್ಲಿ ಬಲಿಷ್ಠ ಕ್ರೊವೇಷಿಯಾ ತಂಡವನ್ನು ಶುಕ್ರವಾರ ಎದುರಿಸಲಿದೆ. ಕ್ವಾಲಿಫೈಯರ್ಸ್ ಹಂತದಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಕ್ರೊವೇಷಿಯಾ ತಂಡ ಭಾರತಕ್ಕೆ ಕಠಿಣ ಸವಾಲೆನಿಸಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ತಂಡ ವಿಶ್ವ ನಂ.37 ಆಟಗಾರ ಹಾಗೂ 2014ರ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್​ರ ಬಲ ಹೊಂದಿದೆ. ತಂಡದಲ್ಲಿರುವ ಆಟಗಾರರ ಪೈಕಿ ಅಗ್ರ 50ರ ಒಳಗಿರುವ ಏಕೈಕ ಆಟಗಾರ ಇವರಾಗಿದ್ದು, ಭಾರತ ತಂಡ ಗೆಲುವಿನ ಹೋರಾಟ ನಡೆಸಬಹುದು.

ತಂಡದ ಅಗ್ರ ರ್ಯಾಂಕ್​ನ ಆಟಗಾರ ಬೋರ್ನಾ ಕೊರಿಕ್ (33ನೇ ಸ್ಥಾನ) ಡೇವಿಸ್ ಕಪ್​ಗೆ ಅಲಭ್ಯರಾಗಿರುವ ಕಾರಣ, ಸುಮಿತ್ ನಗಾಲ್ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಕ್ರೊವೇಷಿಯಾದ ಸಿಂಗಲ್ಸ್ ವಿಭಾಗದ 2ನೇ ಆಟಗಾರ ಬೋರ್ನಾ ಗೊಜೊ ವಿರುದ್ಧ ಆಡಬೇಕಿದೆ. ಗೊಜೊ ಈವರೆಗೆ ಡೇವಿಸ್ ಕಪ್​ನಲ್ಲಿ ಒಂದೂ ಪಂದ್ಯ ಗೆದ್ದಿಲ್ಲ.

ವಿಶ್ವ ರ್ಯಾಂಕಿಂಗ್​ನಲ್ಲಿ 277ನೇ ಸ್ಥಾನದಲ್ಲಿರುವ ಗೊಜೊ ವಿರುದ್ಧದ ಎರಡು ಪಂದ್ಯಗಳನ್ನು ಭಾರತದ ಆಟಗಾರರು ಗೆಲ್ಲುವಲ್ಲಿ ಯಶ ಕಂಡರೆ, ಮುಖಾಮುಖಿಯಲ್ಲಿ ಗೆಲುವು ಸಾಧಿಸುವ ಅಪೂರ್ವ ಅವಕಾಶ ಭಾರತಕ್ಕಿದೆ. ಸುಮಿತ್ ನಗಾಲ್ ಹಾಗೂ ಪ್ರಜ್ಞೇಶ್ ಗುಣೇಶ್ವರರನ್, ಗೊಜೊಗಿಂತ ಉತ್ತಮ ರ್ಯಾಂಕ್ ಹೊಂದಿದ್ದಾರೆ. ನಗಾಲ್ ವಿಶ್ವ ನಂ.127ರ ಆಟಗಾರನಾಗಿದ್ದರೆ, ಪ್ರಜ್ಞೇಶ್ ವಿಶ್ವ ರ್ಯಾಂಕಿಂಗ್​ನ 132ನೇ ಆಟಗಾರನಾಗಿದ್ದಾರೆ. ಗೊಜೊ ವಿರುದ್ಧ ಇಬ್ಬರಿಗೂ ಮೊದಲ ಪಂದ್ಯ ಇದಾಗಿರಲಿದೆ.

ಮದುವೆಯ ಕಾರಣದಿಂದಾಗಿ ಕಳೆದ ಡೇವಿಸ್ ಕಪ್ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಪ್ರಜ್ಞೇಶ್ ಗುಣೇಶ್ವರನ್, ಎದುರಾಳಿ ತಂಡದಲ್ಲಿ ದ್ವಿತೀಯ ದರ್ಜೆಯ ಉತ್ತಮ ಸಿಂಗಲ್ಸ್ ಆಟಗಾರ ಇಲ್ಲದೇ ಇರುವುದು ಭಾರತಕ್ಕೆ ಲಾಭವಾಗಿ ಪರಿಣಮಿಸಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ. ಭಾರತ ತಂಡ ಬಲಿಷ್ಠ ಎದುರಾಳಿಯ ವಿರುದ್ಧ ಅವರ ನೆಲದಲ್ಲಿ ಪಂದ್ಯ ಗೆಲ್ಲದೆ ದೀರ್ಘ ಸಮಯವಾಗಿದೆ. 2008ರಲ್ಲಿ ಸೆರ್ಬಿಯಾ ಹಾಗೂ 2017ರಲ್ಲಿ ಕೆನಡ ವಿರುದ್ಧ ಸೋಲು ಕಾಣುವ ಮೂಲಕ ವಿಶ್ವ ಗುಂಪಿನ ಅರ್ಹತೆ ತಪ್ಪಿಸಿಕೊಂಡಿತ್ತು.ಪಿಟಿಐ/ಏಜೆನ್ಸೀಸ್

ಪಂದ್ಯ ಆರಂಭ: ರಾ.7.30 

ಪೇಸ್​ಗೆ ಕೊನೇ ಪಂದ್ಯ?

ರಾಮ್​ಕುಮಾರ್​ ರಾಮನಾಥನ್​ರನ್ನು ಆಡಿಸುವುದು ಅನುಮಾನವಾಗಿದ್ದು, ಡಬಲ್ಸ್ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಜತೆಯಾಗಿ ಆಡುವ ಸಾಧ್ಯತೆ ಇದೆ. ಈ ಮುಖಾಮುಖಿಯಲ್ಲಿ ಡಬಲ್ಸ್ ಪಂದ್ಯ ಪ್ರಮುಖವಾಗಿ ಇರಲಿದ್ದು, ಗೆಲ್ಲುವ ತಂಡ ನವೆಂಬರ್​ನಲ್ಲಿ ಮ್ಯಾಡ್ರಿಡ್​ನಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ಸ್​ಗೆ ಅರ್ಹತೆ ಪಡೆಯಲಿದೆ. 46 ವರ್ಷದ ಲಿಯಾಂಡರ್ ಪೇಸ್​ಗೆ ಇದು ಕೊನೆಯ ಡೇವಿಸ್ ಕಪ್ ಪಂದ್ಯ ಇದಾಗಲಿರುವ ಸಾಧ್ಯತೆಯೂ ಇದೆ. ಡೇವಿಸ್ ಕಪ್ ಟೂರ್ನಿಯನ್ನು ಗೆಲುವಿನೊಂದಿಗೆ ಮುಗಿಸುವ ಇರಾದೆಯಲ್ಲಿ ಅವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net