

ಬೆಂಗಳೂರು: ಕರೊನಾ ವೈರಸ್ ಲಾಕ್ಡೌನ್ ವೇಳೆ ಆಸ್ಟ್ರೆಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದ ಆಟಗಾರ. ಇದೀಗ 13ನೇ ಐಪಿಎಲ್ಗೆ ದಿನಗಣನೆ ಆರಂಭಗೊಂಡಿದೆ. ಎಲ್ಲರ ಚಿತ್ತ ಯುಎಇಯಲ್ಲಿ ನಡೆಯಲಿರುವ ಐಪಿಎಲ್ನತ್ತ ನೆಟ್ಟಿದೆ. ಇತ್ತೀಚೆಗೆ ಅಭಿಮಾನಿಯೊಬ್ಬ ವಾರ್ನರ್ ಪೋಸ್ಟ್ಗೆ ಈ ಸಲ ಕಪ್ ನಮ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ವಾರ್ನರ್ ಗುಡ್ಲಕ್ ಎಂದು ಹೇಳುವ ಮೂಲಕ ಆರ್ಸಿಬಿ ತಂಡಕ್ಕೆ ಶುಭಾಶಯ ಕಳುಹಿಸಿದ್ದಾರೆ. ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಸನ್ರೈಸರ್ಸ್ ತಂಡ ಮುನ್ನಡೆಸಲಿದ್ದಾರೆ.
2008 ರಿಂದಲೂ ಐಪಿಎಲ್ ಭಾಗವಾಗಿರುವ ಆರ್ಸಿಬಿ ಇದುವರೆಗೂ ಟ್ರೋಫಿ ಜಯಿಸಿಲ್ಲ. 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಜಯಿಸುವಲ್ಲಿ ಮುಗ್ಗರಿಸಿತ್ತು. 2019ರಲ್ಲಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದಿತ್ತು. 2013ರಿಂದ ಕೊಹ್ಲಿ ಆರ್ಸಿಬಿ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಇದುವರೆಗೂ ಆಡಿರುವ 110 ಪಂದ್ಯಗಳಲ್ಲಿ 49ರಲಷ್ಟೇ ಜಯ ದಾಖಲಿಸಿದೆ. 7 ಆವೃತ್ತಿಗಳಲ್ಲಿ ಕೇವಲ 2 ಬಾರಿಯಷ್ಟೇ ಪ್ಲೇ ಆಫ್ ಹಂತಕ್ಕೇರಿದೆ. ಡೇವಿಡ್ ವಾರ್ನರ್ 47 ಪಂದ್ಯಗಳಿಗೆ ಸನ್ರೈಸರ್ಸ್ ತಂಡಕ್ಕೆ ನಾಯಕತ್ವ ವಹಿಸಿದ್ದು, 26 ರಲ್ಲಿ ಜಯ ಕಂಡಿದ್ದಾರೆ. ಜತೆಗೆ 2016ರಲ್ಲಿ ವಾರ್ನರ್ ಸಾರಥ್ಯದಲ್ಲೇ ಸನ್ರೈಸರ್ಸ್ ತಂಡ ಆರ್ಸಿಬಿ ಮಣಿಸಿ ಪ್ರಶಸ್ತಿ ಜಯಿಸಿತ್ತು. ಈ ಬಾರಿಯೂ ವಾರ್ನರ್ ಸನ್ ರೈಸರ್ಸ್ ತಂಡ ಮುನ್ನಡೆಸಲಿದ್ದಾರೆ.