

ಬೆಂಗಳೂರು: ನಿರ್ಣಾಯಕ ಹಂತದಲ್ಲಿ ಸತತ ಗೆಲುವಿನ ಓಟ ಕಾಣುವ ಮೂಲಕ 2016ರ ಸಾಧನೆಯನ್ನು ಮರುಕಳಿಸುವತ್ತ ಮುನ್ನಡೆದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ರಶಸ್ತಿ ಜಯಿಸಿದರೆ, ಅಭಿಮಾನಿಗಳಿಗೆ ಡಬಲ್ ಧಮಾಕಾ ಕಾದಿದೆ. ಯಾಕೆಂದರೆ ಸನ್ರೈಸರ್ಸ್ ನಾಯಕ ಡೇವಿಡ್ ವಾರ್ನರ್, ಸನ್ರೈಸರ್ಸ್ ತಂಡ ಐಪಿಎಲ್ ಪ್ರಶಸ್ತಿ ಜಯಿಸಿದರೆ ‘ಬುಟ್ಟ ಬೊಮ್ಮಾ’ ಹಾಡಿಗೆ ನೃತ್ಯ ಮಾಡುವುದಾಗಿ ಅಭಿಮಾನಿಗಳಿಗೆ ಮಾತುಕೊಟ್ಟಿದ್ದಾರೆ!
ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ಕನ್ನಡತಿ ಪೂಜಾ ಹೆಗ್ಡೆ ಅಭಿನಯದ ‘ಅಲಾ ವೈಕುಂಠಾಪುರಮುಲು’ ಸಿನಿಮಾದ ಜನಪ್ರಿಯ ‘ಬುಟ್ಟ ಬೊಮ್ಮಾ’ ಹಾಡಿಗೆ ಡೇವಿಡ್ ವಾರ್ನರ್ ಲಾಕ್ಡೌನ್ ಸಮಯದಲ್ಲಿ ನರ್ತಿಸಿದ್ದ ಟಿಕ್ಟಾಕ್ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸನ್ರೈಸರ್ಸ್ ಅಭಿಮಾನಿಗಳು ಆಗಲೇ ವಾರ್ನರ್ ನೃತ್ಯಕ್ಕೆ ಫಿದಾ ಆಗಿದ್ದರು. ಅವರು ಪತ್ನಿ ಜತೆಗೂಡಿ ಈ ಹಾಡಿಗೆ ನರ್ತಿಸಿದ್ದರು.
ಸನ್ರೈಸರ್ಸ್ ತಂಡ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯ ಆಡುವುದಕ್ಕೆ ಮುನ್ನ ಮಾತನಾಡಿರುವ ವಾರ್ನರ್, ‘ಸನ್ರೈಸರ್ಸ್ ತಂಡ ಈ ಬಾರಿ ಐಪಿಎಲ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ಸು ಕಂಡರೆ ನಾನು ಬುಟ್ಟ ಬೊಮ್ಮಾ ಹಾಡಿಗೆ ಮತ್ತೆ ನರ್ತಿಸುವುದಾಗಿ ಹೈದರಾಬಾದ್ ಅಭಿಮಾನಿಗಳಿಗೆ ಮಾತು ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
‘ಸನ್ರೈಸರ್ಸ್ ತಂಡ ನನಗೆ ಕುಟುಂಬ ಇದ್ದಂತೆ. ಭಾರತ ನನ್ನ ಪಾಲಿಗೆ 2ನೇ ತವರು ನೆಲವಾಗಿದೆ. ನಮ್ಮ ತಂಡದ ಮೇಲೆ ನನಗೆ ಸಾಕಷ್ಟು ಪ್ರೀತಿ ಇದೆ’ ಎಂದೂ ವಾರ್ನರ್ ಹೇಳಿದ್ದಾರೆ. ಸನ್ರೈಸರ್ಸ್ ತಂಡ 2016ರಲ್ಲಿ ವಾರ್ನರ್ ನಾಯಕತ್ವದಲ್ಲಿಯೇ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಜಯಿಸಿತ್ತು.