

ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಕನಸುಗಳನ್ನು ಹೊತ್ತು ತಂಡದ ಪರವಾಗಿ ಮೈದಾನಕ್ಕಿಳಿಯುವ ಯುವ ಆಟಗಾರರನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯವಾದದ್ದು. ಈ ಕೆಲಸವನ್ನು ಆಯಾ ಕ್ರಿಕೆಟ್ ತಂಡದ ಕೋಚ್, ಮ್ಯಾನೇಜ್ಮೆಂಟ್ಗಿಂತಲೂ ಹೆಚ್ಚಾಗಿ ಮಾಡುತ್ತಿರುವುದು ಕ್ರಿಕೆಟ್ ದಿಗ್ಗಜರು, ಮಾಜಿ ಹಿರಿಯ ಆಟಗಾರರು ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ 3-0 ಅಂತರದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಇಂಗ್ಲೆಂಡ್ ಪರ ಆಕರ್ಷಕ ಬ್ಯಾಟಿಂಗ್ ಮಾಡಿದ ಜೇಮೀ ಸ್ಮಿತ್ ಕುರಿತು ಹಿರಿಯ ಕ್ರಿಕೆಟಿಗ ಡೇವಿಡ್ ಲಾಯ್ಡ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 109 ಎಸೆತಗಳಿಗೆ 95 ರನ್ ಕಲೆಹಾಕಿದ ಇಂಗ್ಲೆಂಡ್ನ ಯುವ ವಿಕೆಟ್ ಕೀಪರ್, ಬ್ಯಾಟರ್ ಜೇಮೀ ಸ್ಮಿತ್ಗೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ಹರಿದುಬಂದಿತು. ಸ್ಮಿತ್ ಬ್ಯಾಟಿಂಗ್ ಶೈಲಿಗೆ ಫಿದಾ ಆದ ಡೇವಿಡ್, "ಈ ಹಿಂದೆಯೂ ಜೇಮೀ ಬಗ್ಗೆ ಸಾಕಷ್ಟು ಮಾತುಗಳನ್ನು ಕೇಳಿದ್ದೇನೆ. ಆದ್ರೆ, ಇದೇ ಮೊದಲ ಬಾರಿಗೆ ಅವರು ಮೈದಾನದಲ್ಲಿ ಆಡಿದ್ದನ್ನು ನೋಡಿದ್ದು. ಕೆವಿನ್ ಪಿಟರ್ಸನ್ ಆಡುತ್ತಿದ್ದ ಸಮಯದಲ್ಲಿದ್ದ ಆಸಕ್ತಿ ಈಗ ನನಗಿಲ್ಲ. ಆದರೆ, ಅದೇ ಉತ್ಸಾಹವನ್ನು ನೆನಪಿಸಿದ್ದು ಮಾತ್ರ ಸ್ಮಿತ್ ಬ್ಯಾಟಿಂಗ್ ವೈಖರಿ" ಎಂದರು.
"ಬಹುದಿನಗಳ ಕಾಲ ಸ್ಮಿತ್ ಜತೆಯಲ್ಲಿ ಇಂಗ್ಲೆಂಡ್ ಜೆರ್ಸಿ ಉಳಿಯಲಿದೆ. ತಮ್ಮ ತಂಡಕ್ಕಾಗಿ ಖಂಡಿತ ಅವರು ಮುಂದಿನ ಪಂದ್ಯಗಳನ್ನು ಗೆಲ್ಲಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕ, ವಿಕೆಟ್ ಕೀಪರ್ ಆ್ಯಡಮ್ ಗಿಲ್ಕ್ರಿಸ್ಟ್ರ ಛಾಪು ಸ್ಮಿತ್ ಅವರಲ್ಲಿದೆ. ಇಂಗ್ಲೆಂಡ್ ಕ್ರಿಕೆಟ್ಗೆ ಜೇಮೀ ಒಬ್ಬ ಅದ್ಭುತ ಆಟಗಾರ ಎಂಬುದರಲ್ಲಿ ಅನುಮಾನವೇ ಇಲ್ಲ" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).