ಐಪಿಎಲ್​ ಹರಾಜಿಗಾಗಿ ಆಸೀಸ್​ ತಂಡಕ್ಕೆ ಕೈಕೊಟ್ಟ ಡೇನಿಯಲ್ ವೆಟ್ಟೋರಿ!

web vettori
Published on

ಪರ್ತ್​: ಆಸ್ಟ್ರೆಲಿಯಾ ತಂಡದ ಸಹಾಯಕ ಕೋಚ್​ ಡೇನಿಯಲ್​ ವೆಟ್ಟೋರಿ ಐಪಿಎಲ್​ ಹರಾಜಿನಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತ ವಿರುದ್ಧದ ಆರಂಭಿಕ ಟೆಸ್ಟ್​ ಪಂದ್ಯದ ನಡುವೆಯೇ ನಿರ್ಗಮಿಸಲಿದ್ದಾರೆ.

ಪರ್ತ್​ ಟೆಸ್ಟ್​ ಪಂದ್ಯ ನವೆಂಬರ್​ 22ಕ್ಕೆ ಶುರುವಾಗಲಿದ್ದರೆ, ಐಪಿಎಲ್​ ಹರಾಜು ಪ್ರಕ್ರಿಯೆ ನವೆಂಬರ್​ 24-25ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ. ನ್ಯೂಜಿಲೆಂಡ್​ ಮಾಜಿ ಸ್ಪಿನ್ನರ್​ ವೆಟ್ಟೋರಿ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಮುಖ್ಯ ಕೋಚ್​ ಆಗಿದ್ದಾರೆ.

ಬಾರ್ಡರ್​-ಗಾವಸ್ಕರ್​ ಟ್ರೋಫಿಗೆ ಆಸೀಸ್​ ತಂಡದ ಅಂತಿಮ ಹಂತದ ಸಿದ್ಧತೆ ಸೋಮವಾರ ಆರಂಭಗೊಂಡಿದೆ. ಮೊದಲ ಟೆಸ್ಟ್​ ಸಿದ್ಧತೆಯಲ್ಲಿ ಆಸೀಸ್​ ತಂಡಕ್ಕೆ ನೆರವಾದ ಬಳಿಕ 45 ವರ್ಷದ ವೆಟ್ಟೋರಿ ಐಪಿಎಲ್​ ಹರಾಜು ಪ್ರಕ್ರಿಯೆಗೆ ತೆರಳಲಿದ್ದಾರೆ. ನಂತರದಲ್ಲಿ ಸರಣಿಯ ಕೊನೇ 4 ತಂಡಗಳಿಗೆ ಪೂರ್ಣಪ್ರಮಾಣದಲ್ಲಿ ಲಭ್ಯರಿರುತ್ತಾರೆ ಎಂದು ಆಸೀಸ್​ ತಂಡದ ವಕ್ತಾರರು ತಿಳಿಸಿದ್ದಾರೆ. ವೆಟ್ಟೋರಿ ಗೈರಿನ ವೇಳೆ ಕ್ರಿಕೆಟ್​ ಆಸ್ಟ್ರೆಲಿಯಾದ ನ್ಯಾಷನಲ್​ ಡೆವೆಲಪ್​ಮೆಂಟ್​ ಕೋಚ್​ ಲಾಚ್ಲನ್​ ಸ್ಟೀವನ್ಸ್​ ಆಸೀಸ್​ ತಂಡಕ್ಕೆ ನೆರವಾಗಲಿದ್ದಾರೆ.

ಇನ್ನು ಪಂಜಾಬ್​ ಮತ್ತು ಲಖನೌ ತಂಡಗಳ ಕೋಚ್​ಗಳಾಗಿರುವ ರಿಕಿ ಪಾಂಟಿಂಗ್​ ಮತ್ತು ಜಸ್ಟಿನ್​ ಲ್ಯಾಂಗರ್​ ಕೂಡ ಐಪಿಎಲ್​ ಹರಾಜಿನಲ್ಲಿ ಪಾಲ್ಗೊಳ್ಳುವ ಸಲುವಾಗಿ ಪರ್ತ್​ ಟೆಸ್ಟ್​ ಪಂದ್ಯದ ವೀಕ್ಷಕ ವಿವರಣೆ ಕೆಲಸಕ್ಕೆ ಗೈರಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net