ಭಾರತೀಯರ ಪದಕ ಬೇಟೆ: 100 ಮೀಟರ್ಸ್ ಓಟದಲ್ಲಿ ಚಿನ್ನ-ಬೆಳ್ಳಿ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ ಪ್ಯಾರಾ ಅಥ್ಲೀಟ್‌ಗಳು! Commonwealth Games 2026

ಭಾರತೀಯರ ಪದಕ ಬೇಟೆ: 100 ಮೀಟರ್ಸ್ ಓಟದಲ್ಲಿ ಚಿನ್ನ-ಬೆಳ್ಳಿ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ ಪ್ಯಾರಾ ಅಥ್ಲೀಟ್‌ಗಳು! Commonwealth Games 2026
ಭಾರತೀಯರ ಪದಕ ಬೇಟೆ: 100 ಮೀಟರ್ಸ್ ಓಟದಲ್ಲಿ ಚಿನ್ನ-ಬೆಳ್ಳಿ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ ಪ್ಯಾರಾ ಅಥ್ಲೀಟ್‌ಗಳು! Commonwealth Games 2026
Published on

ಪ್ರಮುಖ ಮುಖ್ಯಾಂಶಗಳು

  • ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿಯ ಪದಕಗಳ ಸುರಿಮಳೆ
  • ಪ್ಯಾರಾ ಅಥ್ಲೆಟಿಕ್ಸ್ 100 ಮೀಟರ್ಸ್ ಓಟದಲ್ಲಿ ಭಾರತದ ದಿಲೀಪ್ ಗಾವಿತ್‌ಗೆ ಐತಿಹಾಸಿಕ ಚಿನ್ನ
  • ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಮಿಂಚಿದ ಮೊಹಮ್ಮದ್ ಬಾಸಿಲ್ ಹಾಗೂ ಮುರಳಿ ಶ್ರೀಶಂಕರ್‌ಗೆ ಬೆಳ್ಳಿ ಪದಕ
  • ಕಾಮನ್‌ವೆಲ್ತ್ ಲಾಂಗ್ ಜಂಪ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಮುರಳಿ ಶ್ರೀಶಂಕರ್
  • ಗ್ಲಾಸ್ಗೋದಲ್ಲಿ ಭಾರತೀಯ ಕ್ರೀಡಾಪಟುಗಳಿಂದ ಪದಕಗಳ ಬೇಟೆಯಲ್ಲಿ ಹೊಸ ಮೈಲಿಗಲ್ಲು
Commonwealth Games 2026 : ಪ್ರಸ್ತುತ ಸ್ಕಾಟ್ಲೆಂಡ್​ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಭಾರತದ ಪಾಲಿಗೆ ಬುಧವಾರ ಐತಿಹಾಸಿಕ ದಿನವಾಗಿದೆ. ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ದಿಲೀಪ್ ಮಹಾದು ಗಾವಿತ್ ಮತ್ತು ಮೊಹಮ್ಮದ್ ಬಾಸಿಲ್ ಅವರು ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಮತ್ತೊಂದೆಡೆ, ಪುರುಷರ ಹೈ ಜಂಪ್ ಫೈನಲ್‌ನಲ್ಲಿ ಅದ್ಭುತ ಕಂಬ್ಯಾಕ್​ ಮಾಡಿದ ಮುರಳಿ ಶ್ರೀಶಂಕರ್ ಅವರು ಭಾರತಕ್ಕೆ ಮತ್ತೊಂದು ಬೆಳ್ಳಿಯ ಪದಕವನ್ನು ತಂದುಕೊಡುವ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ. 
ಪುರುಷರ 100 ಮೀಟರ್ಸ್ ಟಿ47 ವಿಭಾಗದಲ್ಲಿ ದಿಲೀಪ್ ಮಹಾದು ಗಾವಿತ್ ಅವರು 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಕಾಮನ್‌ವೆಲ್ತ್ ಕ್ರೀಡಾಕೂಟದ ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಇವರೊಂದಿಗೆ ಸ್ಪರ್ಧಿಸಿದ ಮತ್ತೊಬ್ಬ ಭಾರತೀಯ ಅಥ್ಲೀಟ್ ಮೊಹಮ್ಮದ್ ಬಾಸಿಲ್ ಅವರು 10.83 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. 
ಈ ಭರ್ಜರಿ ವಿಜಯದೊಂದಿಗೆ ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಲಭಿಸಿದಂತಾಗಿದೆ. ಇದಕ್ಕೂ ಮುನ್ನ ಮಹಿಳೆಯರ 48 ಕೆ.ಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರೆ, ಮಹಿಳೆಯರ ಎಫ್‌57 ಶಾಟ್ ಪುಟ್ ಸ್ಪರ್ಧೆಯಲ್ಲಿ ಶರ್ಮಿಳಾ ಧಂಕರ್ ಮತ್ತೊಂದು ಚಿನ್ನದ ಪದಕವನ್ನು ಗೆದ್ದು ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದರು.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರೆಸಿರುವ ಭಾರತದ ಮುರಳಿ ಶ್ರೀಶಂಕರ್, ಪುರುಷರ ಲಾಂಗ್ ಜಂಪ್ ಫೈನಲ್‌ನಲ್ಲಿ 8.09 ಮೀಟರ್ ದೂರ ಜಿಗಿಯುವ ಮೂಲಕ ತಮ್ಮ ಎರಡನೇ ಸತತ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ. ಆರಂಭದಲ್ಲಿ 8.03 ಮೀಟರ್ ಜಿಗಿದು ಮೂರನೇ ಸ್ಥಾನದಲ್ಲಿದ್ದ ಅವರು, ಬಳಿಕ ತಮ್ಮ ಪ್ರಯತ್ನವನ್ನು 8.09 ಮೀಟರ್‌ಗೆ ಹೆಚ್ಚಿಸಿಕೊಳ್ಳುವ ಮೂಲಕ ತಾತ್ಕಾಲಿಕವಾಗಿ ಅಗ್ರಸ್ಥಾನಕ್ಕೇರಿದ್ದರು. ಆದರೆ, ಜಮೈಕಾದ ತಜಾಯ್ ಗೇಲ್ 8.15 ಮೀಟರ್ ದೂರ ಜಿಗಿದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರೆ, ಸ್ಕಾಟ್ಲೆಂಡ್‌ನ ಸ್ಟೀಫನ್ ಮೆಕೆಂಜಿ 8.08 ಮೀಟರ್ ಜಿಗಿದು ಕಂಚಿನ ಪದಕ ಪಡೆದರು. ಇನ್ನು ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಭಾರತೀಯ ಅಥ್ಲೀಟ್ ಲೋಕೇಶ್ ಸತ್ಯನಾಥನ್ 7.97 ಮೀಟರ್ ಜಿಗಿಯುವ ಮೂಲಕ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಬಾಕ್ಸಿಂಗ್​ನಲ್ಲಿ ಪದಕಗಳು ಖಚಿತ

ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಬಾಕ್ಸಿಂಗ್ ತಂಡವು ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ಬುಧವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಆರು ಮೈಲಿಗಲ್ಲು ಸಾಧಿಸುವ ಮೂಲಕ ಭಾರತದ ಖಾತೆಗೆ ಒಟ್ಟು 10 ಪದಕಗಳು ಖಚಿತಗೊಂಡಿವೆ. ಸಾಕ್ಷಿ ಚೌಧರಿ (51 ಕೆ.ಜಿ), ಅರುಂಧತಿ ಚೌಧರಿ (70 ಕೆ.ಜಿ), ಸಚಿನ್ ಸಿವಾಚ್ (60 ಕೆ.ಜಿ), ಅಂಕುಶ್ ಪಂಗಲ್ (80 ಕೆ.ಜಿ), ನರೇಂದರ್ ಬೆರ್ವಾಲ್ (+90 ಕೆ.ಜಿ) ಮತ್ತು ಹಾಲಿ ವಿಶ್ವ ಚಾಂಪಿಯನ್ ಜೈಸ್ಮಿನ್ ಲಂಬೋರಿಯಾ (57 ಕೆ.ಜಿ) ಅವರು ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದರು. ಇವರು ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದ್ದ ಲವ್ಲಿನಾ ಬೊರ್ಗೊಹೈನ್ (75 ಕೆ.ಜಿ), ಪ್ರಿಯಾ ಘಂಗಾಸ್ (60 ಕೆ.ಜಿ), ಪ್ರೀತಿ ಪವಾರ್ (54 ಕೆ.ಜಿ) ಮತ್ತು ಜದುಮಣಿ ಸಿಂಗ್ (55 ಕೆ.ಜಿ) ಅವರೊಂದಿಗೆ ಕೈಜೋಡಿಸಿದ್ದಾರೆ.
ದಿನದ ಕೊನೆಯಲ್ಲಿ ನಡೆದ ಮಹಿಳೆಯರ 57 ಕೆ.ಜಿ ವಿಭಾಗದ ತೀವ್ರ ಜಿದ್ದಾಜಿದ್ದಿನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಎಲೈಸ್ ಗ್ಲಿನ್ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸಿದ ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಜೈಸ್ಮಿನ್ ಲಂಬೋರಿಯಾ, ಒತ್ತಡದ ಪರಿಸ್ಥಿತಿಯಲ್ಲೂ ಸಂಯಮ ಕಾಯ್ದುಕೊಂಡು ಭಾರತಕ್ಕೆ ಮತ್ತೊಂದು ಪದಕವನ್ನು ಖಚಿತಪಡಿಸಿದರು.
ಬುಧವಾರ ದಾಖಲಾದ ಈ ಆರು ಭರ್ಜರಿ ಜಯಗಳಿಂದ ಭಾರತದ ಸೆಮಿಫೈನಲಿಸ್ಟ್‌ಗಳ ಸಂಖ್ಯೆ 10ಕ್ಕೇರಿದ್ದು, ಇದರೊಂದಿಗೆ ಬಾಕ್ಸಿಂಗ್ ವಿಭಾಗದಲ್ಲಿ ಕನಿಷ್ಠ 10 ಕಂಚಿನ ಪದಕಗಳು ಭಾರತದ ಪಾಲಾಗುವುದು ಖಚಿತವಾಗಿದೆ. ಈ ಸಾಧನೆಯ ಮೂಲಕ ಭಾರತೀಯ ಬಾಕ್ಸಿಂಗ್ ತಂಡವು, ಕೇವಲ ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಮೂರು ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ಗಳಿಸಿದ್ದ ಹಿಂದಿನ 2022ರ ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದ ಒಟ್ಟು ಪದಕಗಳ ದಾಖಲೆಯನ್ನು ಈಗಾಗಲೇ ಮೀರಿ ನಿಂತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net