

CSK vs PBKS: ಇಂದು (ಏ.08) ಚಂಡೀಗಢ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್ಕೆ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್, 20 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 219 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ ಉತ್ತಮ ಆರಂಭದ ಜತೆಗೆ ಅತ್ಯುತ್ತಮ ಇನ್ನಿಂಗ್ಸ್ ನೀಡಿದರೂ ಗೆಲುವನ್ನು ದಕ್ಕಿಸಿಕೊಳ್ಳುವಲ್ಲಿ ಮತ್ತೊಮ್ಮೆ ಎಡವಿತು.
ರಚಿನ್ ರವೀಂದ್ರ ಮತ್ತು ಡಿವಾನ್ ಕಾನ್ವೆ ಉತ್ತಮ ಆರಂಭ ನೀಡುವ ಮೂಲಕ ಪವರ್ಪ್ಲೇನಲ್ಲಿ ಹೆಚ್ಚುವರಿ ರನ್ ಕಲೆಹಾಕಿದರು. ಆದ್ರೆ, ಹೆಚ್ಚು ಹೊತ್ತು ಕ್ರೀಸ್ಗೆ ಅಂಟದ ರಚಿನ್, ವಿಕೆಟ್ ಕಳೆದುಕೊಂಡರು. ರುತುರಾಜ್ ಗಾಯಕ್ವಾಡ್, ಶಿವಂ ದುಬೆ ನಂತರ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ, 12 ಎಸೆತಗಳಲ್ಲಿ 27 ರನ್ ಸಿಡಿಸುವ ಮೂಲಕ ಗೆಲುವಿನ ಭರವಸೆ ನೀಡಿದರು. ಆದರೆ, ಕೊನೆ ಕ್ಷಣಗಳಲ್ಲಿ ಚಹಲ್ಗೆ ಕ್ಯಾಚ್ ನೀಡುವ ಮೂಲಕ ಸೋಲು ಖಚಿತ ಎಂಬುದನ್ನು ಹೇಳಿ ಹೋದರು.
ಇದು ಸಿಎಸ್ಕೆ ಅಭಿಮಾನಿ ಬಳಗಕ್ಕೆ ಭಾರೀ ನಿರಾಶೆ ಮೂಡಿಸಿತು. ಸತತವಾಗಿ ನಾಲ್ಕು ಪಂದ್ಯಗಳಲ್ಲಿ ಸೋಲುಂಡ ಚೆನ್ನೈ ಪಡೆಗೆ ಗೆಲುವಿನ ಹಪಾಹಪಿ ಶುರುವಾಗಿದೆ. ಆರಂಭದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲಿಯೂ ಭಾರೀ ಮುಖಭಂಗವನ್ನು ಅನುಭವಿಸಿದೆ.