ಇಂದು ಪಂಜಾಬ್-ಚೆನ್ನೈ ಮುಖಾಮುಖಿ, ಸೋತವರ ಕದನದಲ್ಲಿ ಗೆಲುವವರು ಯಾರು?

punjab and csk for web
Published on

ದುಬೈ: ಸೋಲು, ಗೆಲುವಿನಲ್ಲಿ ಸಮಾನವಾಗಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಎಂಎಸ್ ಧೋನಿ ನೇತೃತ್ವದ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್-13ರ ಪಂದ್ಯದಲ್ಲಿ ಎದುರಾಗಲಿವೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ದಿನದ ಎರಡನೇ ಪಂದ್ಯ ಉಭಯ ತಂಡಗಳ ಪಾಲಿಗೆ ಮಹತ್ವ ಪಡೆದಿದೆ. ಈಗಾಗಲೇ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಎಂಎಸ್ ಧೋನಿ ಬಳಗಕ್ಕೆ ಗೆಲುವು ಅನಿವಾರ್ಯವಾದರೆ, ಪಂಚ ಕನ್ನಡಿಗರನ್ನು ಹೊಂದಿರುವ ಪಂಜಾಬ್ ಕೂಡ ಹ್ಯಾಟ್ರಿಕ್ ಸೋಲಿನ ಭೀತಿಯಿಂದ ಪಾರಾಗಬೇಕಿದೆ.

ಸುಧಾರಿಸುವುದೇ ಪಂಜಾಬ್ ಬೌಲಿಂಗ್?

ಪಂಜಾಬ್ ತಂಡದ ಪರ ಬ್ಯಾಟ್ಸ್‌ಮನ್‌ಗಳು ಮಿಂಚುತ್ತಿದ್ದರೂ ಬೌಲಿಂಗ್‌ಗಳಿಂದ ಇದುವರೆಗೆ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಡೆತ್ ಓವರ್‌ಗಳಲ್ಲಿ ಬೌಲರ್‌ಗಳು ಕೈಕೊಡುತ್ತಿರುವುದು ತಂಡಕ್ಕೆ ಇದುವರೆಗೆ ದೊಡ್ಡ ಹಿನ್ನಡೆಯಾಗಿದೆ. ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 2 ಬಾರಿ 200 ರನ್ ಪೇರಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್ ವಿಫಲವಾಗುತ್ತಿರುವುದು ಟೀಮ್ ಮ್ಯಾನೇಜ್‌ಮೆಂಟ್‌ಗೆ ತಲೆನೋವು ತಂದಿದೆ. ಆದರೆ, ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಶಮಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ.

ಸಿಎಸ್‌ಕೆಗೆ ಕೈಕೊಡುತ್ತಿರುವ ಹಿರಿಯರು

ಸಿಎಸ್‌ಕೆ ತಂಡ ಬಹುತೇಕ ಅನುಭವಿ ಆಟಗಾರರನ್ನೇ ಹೊಂದಿದ್ದರೂ, ಯಾರಿಂದಲೂ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಆರಂಭದಲ್ಲೇ ಶೇನ್ ವ್ಯಾಟ್ಸನ್ ಕೈಕೊಡುತ್ತಿದ್ದರೆ, ಫಾಫ್ ಡು ಪ್ಲೆಸಿಸ್ ಅಗತ್ಯ ವೇಳೆಯಲ್ಲಿ ಕೈಕೊಡುತ್ತಿದ್ದಾರೆ. ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ ಮಧ್ಯಮ ಕ್ರಮಾಂಕದ ಮೇಲೆ ಸಾಕಷ್ಟು ಒತ್ತಡ ಬೀಳುತ್ತಿದೆ.

ಇದನ್ನೂ ಓದಿ:

ಟೀಮ್ ನ್ಯೂಸ್

ಕಿಂಗ್ಸ್ ಇಲೆವೆನ್ ಪಂಜಾಬ್: ಸತತ 2 ಪಂದ್ಯಗಳಲ್ಲಿ ಸೋಲನುಭವಿಸಿರುವ ತಂಡ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಕನ್ನಡಿಗ ಕೆ.ಗೌತಮ್ ಬದಲಿಗೆ ಎಂ.ಅಶ್ವಿನ್ ತಂಡಕ್ಕೆ ವಾಪಸಾಗಬಹುದು. ಸತತವಾಗಿ ವಿಲರಾಗಿರುವ ಮ್ಯಾಕ್ಸ್‌ವೆಲ್ ಬದಲಿಗೆ ಕ್ರಿಸ್ ಗೇಲ್ ಹಾಗೂ ಜೇಮ್ಸ್ ನೀಶಾಮ್ ಬದಲಿಗೆ ಮುಜೀಬ್ ಉರ್ ರೆಹಮಾನ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ನಾಯಕ, ವಿಕೀ), ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್/ಕ್ರಿಸ್ ಗೇಲ್, ಮಂದೀಪ್ ಸಿಂಗ್, ಜೇಮ್ಸ್ ನೀಶಾಮ್/ಮುಜೀಬ್ ಉರ್ ರೆಹಮಾನ್, ರ್ಸ್ರಾಜ್ ಖಾನ್, ಎಂ.ಅಶ್ವಿನ್/ಕೆ.ಗೌತಮ್, ಮೊಹಮದ್ ಶಮಿ, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 48 ರನ್ ಸೋಲು.

ಚೆನ್ನೈ ಸೂಪರ್‌ಕಿಂಗ್ಸ್: ಅನುಭವಿ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದರೂ ಆಡುವ ಬಳಗದಿಂದ ಹೊರಬೀಳುವ ಸಾಧ್ಯತೆ ಇಲ್ಲ. ಸನ್‌ರೈಸರ್ಸ್‌ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದರೂ ಗೆಲುವಿನ ಹಾದಿಗೆ ಮರಳಲಿಲ್ಲ. ರೈನಾ, ಹರ್ಭಜನ್ ಸಿಂಗ್ ಗೈರಿನಲ್ಲಿ ತಂಡದಲ್ಲಿ ಸಮರ್ಥ ಮೀಸಲು ಆಟಗಾರರ ಕೊರತೆಯೂ ಕಾಡುತ್ತಿದೆ.

ಸಂಭಾವ್ಯ ತಂಡ: ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಫಾಫ್ ಡು ಪ್ಲೆಸಿಸ್, ಎಂಎಸ್ ಧೋನಿ (ನಾಯಕ, ವಿಕೀ), ಸ್ಯಾಮ್ ಕರ‌್ರನ್, ಕೇದಾರ್ ಜಾಧವ್/ಋತುರಾಜ್ ಗಾಯಕ್ವಾಡ್, ಡ್ವೈನ್ ಬ್ರಾವೊ, ರವೀಂದ್ರ ಜಡೇಜಾ, ಪೀಯುಷ್ ಚಾವ್ಲಾ, ಶಾರ್ದೂಲ್ ಠಾಕೂರ್, ದೀಪರ್ ಚಹರ್.

ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 7 ರನ್ ಸೋಲು.

ಪಂದ್ಯ ಆರಂಭ: ರಾತ್ರಿ: 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 21, ಸಿಎಸ್‌ಕೆ: 12, ಪಂಜಾಬ್: 9

4: ಸಿಎಸ್‌ಕೆ ತಂಡ ಐಪಿಎಲ್‌ನಲ್ಲಿ ಇದುವರೆಗೆ ಕೇವಲ 4 ಆವೃತ್ತಿಗಳಲ್ಲಿ ಸತತ 3 ಪಂದ್ಯಗಳಲ್ಲಿ ಸೋಲನುಭವಿದೆ. 2008, 2010 ಹಾಗೂ 2014ರಲ್ಲಿ ಹ್ಯಾಟ್ರಿಕ್ ಸೋಲು ಕಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net