

ಬೆಂಗಳೂರು: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚುಟುವಟಿಕೆ ಹಂತ ಹಂತವಾಗಿ ಆರಂಭಗೊಳ್ಳುತ್ತಿವೆ. ಜನವರಿ 21ರೊಳಗೆ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ನೀಡುವುದು ಹಾಗೂ ಫೆ.4ರೊಳಗೆ ತಂಡಗಳ ನಡುವೆ ವರ್ಗಾವಣೆ ಪ್ರಕ್ರಿಯೆ ಮುಕ್ತಾಯಗೊಳಿಸುವಂತೆ ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಸೂಚಿಸಿದೆ. ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಹೆಚ್ಚು ಆಟಗಾರರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. 13ನೇ ಆವೃತ್ತಿಯಲ್ಲಿ ಯುಎಇಗೆ ತೆರಳಿ ಕ್ವಾರಂಟೈನ್ ಅವಧಿಯಲ್ಲೇ ವೈಯಕ್ತಿಕ ಕಾರಣ ನೀಡಿ ತವರಿಗೆ ವಾಪಸಾಗಿದ್ದ ಹಿರಿಯ ಆಟಗಾರ ಸುರೇಶ್ ರೈನಾ ಸಿಎಸ್‌ಕೆ ತಂಡದಲ್ಲೇ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಆವೃತ್ತಿಯಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿದ್ದ ಸಿಎಸ್‌ಕೆ ಈ ಬಾರಿ ಬಹುತೇಕ ಹೊಸ ತಂಡ ಕಟ್ಟಲು ನಿರ್ಧರಿಸಿದಂತಿದೆ. ಕಳೆದ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಿಂದ ಕೇವಲ 62 ರನ್ ಬಾರಿಸಿದ್ದ ಕೇದಾರ್ ಜಾಧವ್, ಪೀಯುಷ್ ಚಾವ್ಲಾ, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್‌ರಂಥ ಹಿರಿಯ ಆಟಗಾರರು ತಂಡದಿಂದ ಬಿಡುಗಡೆಯಾಗುವ ಪಟ್ಟಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಕಾರಣ ನೀಡಿ ಹರ್ಭಜನ್ ಸಿಂಗ್ ಕಳೆದ ಬಾರಿ ಯುಎಇಗೆ ಪ್ರಯಾಣ ಬೆಳೆಸಿರಲಿಲ್ಲ. ಇಮ್ರಾನ್ ತಾಹಿರ್‌ಗೆ ಆಡಲು ಹೆಚ್ಚು ಅವಕಾಶ ಸಿಕ್ಕಿರಲಿಲಲ್ಲ. ಪೀಯುಷ್ ಚಾವ್ಲಾ ಕೂಡ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಿಸಿಕೊಂಡಿರಲಿಲ್ಲ.
ಈ ಆಟಗಾರರ ಪೈಕಿ ಕೇದಾರ್ ಜಾಧವ್ ತಂಡದಿಂದ ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. 2018ರಲ್ಲಿ 7.8 ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡ ಸೇರ್ಪಡೆಗೊಂಡಿದ್ದ ಜಾಧವ್, ಮೊದಲ ಪಂದ್ಯದಲ್ಲಿ 24 ರನ್‌ಗಳಿಸಿದ್ದರು. ಬಳಿಕ ಗಾಯದ ಸಮಸ್ಯೆಯಿಂದಾಗಿ ಲೀಗ್ ಪೂರ್ತಿ ಹೊರಗುಳಿದಿದ್ದರು. 2019ರಲ್ಲಿ ಲೀಗ್ ಹಂತದಲ್ಲಿ ಆಡಿದ್ದರೂ ಪ್ಲೇಆಫ್ ಹಂತದಿಂದ ಹೊರಗುಳಿದಿದ್ದರು. 2020ರ ಆವೃತ್ತಿಯಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯರಾದರೂ ನಿರೀಕ್ಷಿತ ಮಟ್ಟದಲ್ಲಿ ಉತ್ತಮ ನಿರ್ವಹಣೆ ತೋರಿರಲಿಲ್ಲ.