

CSK: ಇಂದು (ಮಾ.30) ತನ್ನ ಮೂರನೇ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್, ಗೆಲುವಿನ ಹಪಾಹಪಿಯಲ್ಲಿದೆ. ಆರ್ಆರ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಸಿಎಸ್ಕೆ, ರಾಜಸ್ಥಾನ ಪಡೆಗೆ ಬ್ಯಾಟ್ ಮಾಡುವಂತೆ ತಿಳಿಸಿತು. ಅಂತೆಯೇ ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ ಪಡೆ, 20 ಓವರ್ ಅಂತ್ಯಕ್ಕೆ 182 ರನ್ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್, ಮೊದಲ 10 ಓವರ್ಗಳಲ್ಲಿ ಸಿಎಸ್ಕೆ ಬೌಲರ್ಗಳ ಬೆವರಿಳಿಸಿದರು. ಆರಂಭಿಕ ಹಂತದಲ್ಲೇ ಯಶಸ್ವಿ ಜೈಸ್ವಾಲ್, ಬೌಲರ್ ಖಲೀಲ್ಗೆ ತಮ್ಮ ವಿಕೆಟ್ ಒಪ್ಪಿಸಿ, ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಈ ವೇಳೆ ಕ್ರೀಸ್ಗೆ ಅಂಟಿ ನಿಂತ ನಿತೀಶ್ ರಾಣಾ, ತಮ್ಮ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದರು.
ಮತೀಶಾ ಪತಿರಾನಾ, ಖಲೀಲ್ ಅಹಮ್ಮದ್ ಮತ್ತು ನೂರ್ ಅಹ್ಮದ್ ತಲಾ ಎರಡು ವಿಕೆಟ್ ಕಬಳಿಸಿ ತಂಡದ ಪರ ಮಿಂಚಿದರು. ಇನ್ನು ಆರ್. ಅಶ್ವಿನ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆದರು. ಪತಿರಾನಾ ಹಿಡಿದ ವೇಗದ ಕ್ಯಾಚ್ ನೋಡುಗರ ಹುಬ್ಬೇರಿಸಿದ್ದು, ಎರಡು ಅಮೋಘ ಕ್ಯಾಚ್ ಸಿಎಸ್ಕೆ ಪಾಲಾಯಿತು. ಇದು ಮೈದಾನದಲ್ಲಿ ಸೇರಿರುವ ಅಭಿಮಾನಿಗಳನ್ನು ರಂಜಿಸಿತು.
36 ಎಸೆತದಲ್ಲಿ 81 ರನ್ ಬಾರಿಸಿದ ರಾಣಾ, 10 ಬೌಂಡರಿ ಮತ್ತು 5 ಸಿಕ್ಸರ್ಗಳನ್ನು ಸಿಡಿಸಿದರು. 9 ವಿಕೆಟ್ಗಳನ್ನು ಕಳೆದುಕೊಂಡ ಆರ್ಆರ್ 183 ರನ್ಗಳ ಗುರಿಯನ್ನು ಚೆನ್ನೈಗೆ ನೀಡಿದೆ. ಈ ಗುರಿಯನ್ನು ಬೆನ್ನಟ್ಟಲಿರುವ ರುತುರಾಜ್ ಪಡೆ, ಇಂದಿನ ಪಂದ್ಯದಲ್ಲಿ ಆದರೂ ಗೆಲುವು ಸಾಧಿಸಲಿದೆಯೇ ಅಥವಾ ಮತ್ತೊಮ್ಮೆ ಅಭಿಮಾನಿಗಳ ಬೇಸರಕ್ಕೆ ಗುರಿಯಾಗಲಿದೆಯಾ? ಎಂಬುದನ್ನು ಕಾದು ನೋಡಬೇಕಿದೆ.