

CSK vs KKR: ನಿನ್ನೆ (ಏ.11) ಚೆಪಾಕ್ನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಹೀನಾಯ ಸೋಲುಂಡ ಚೆನ್ನೈ ಸೂಪರ್ ಕಿಂಗ್ಸ್, ಭಾರೀ ಅಂತರದಲ್ಲಿ ತವರಿನಲ್ಲೇ ಮುಖಭಂಗ ಅನುಭವಿಸಿತು. ಪಂದ್ಯ ಪೂರ ಅತ್ಯಂತ ಕಳಪೆ ಪ್ರದರ್ಶನ ತೋರಿದ ಸಿಎಸ್ಕೆ ಬ್ಯಾಟರ್ಸ್ ಮತ್ತು ಬೌಲರ್ಗಳು, ಸತತ ಐದನೇ ಸೋಲಿಗೆ ನೇರವಾಗಿ ಕಾರಣರಾದರು. ಇದು ಸಿಎಸ್ಕೆ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
18ನೇ ಆವೃತ್ತಿ ಆರಂಭದಲ್ಲಿ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯಗಳನ್ನು ಸಿಎಸ್ಕೆ ಹೀನಾಯವಾಗಿ ಸೋತಿದೆ. ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಹೊಂದದ ಐದು ಬಾರಿ ಚಾಂಪಿಯನ್ಸ್ ತಂಡ, ಎದುರಾಳಿಗಳ ವಿರುದ್ಧ ಪೈಪೋಟಿ ಕೊಡಲು ಪರದಾಡುವಂತ ಸ್ಥಿತಿ ತಲುಪಿದೆ. ಇದರಿಂದ ಗೆಲುವಿನ ಮಾತು ಬಹಳ ದೂರ ಉಳಿದಿದೆ.
ಐದು ಪಂದ್ಯಗಳ ಬಳಿಕ ನಿನ್ನೆಯ ಪಂದ್ಯದಲ್ಲಿ ಚೆನ್ನೈ ಪಡೆಗೆ ನಾಯಕನಾಗಿ ಅಖಾಡಕ್ಕಿಳಿದ ಮಹೇಂದ್ರ ಸಿಂಗ್ ಧೋನಿ, ಖಂಡಿತ ತಮ್ಮ ಕ್ಯಾಪ್ಟನ್ಸಿಯಲ್ಲಿ ಗೆಲುವು ನೋಡಲಿದ್ದಾರೆ ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ, ಅದೂ ಹುಸಿಯಾಯಿತು. ಇನ್ನು ತಂಡದ ಅತ್ಯಂತ ಕಳಪೆ ಪ್ರದರ್ಶನದಿಂದ ಬೇಸರಗೊಂಡ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಲ್ಲಿ ಒಬ್ಬರಾದ ಕ್ರಿಸ್ ಶ್ರೀಕಾಂತ್, "ಈ ಸೀಸನ್ನಲ್ಲಿ ನೀವು ಉಳಿಯಬೇಕಾದರೆ ಮೊದಲು ಪೃಥ್ವಿ ಶಾರನ್ನು ತಂಡಕ್ಕೆ ಕರೆದುಕೊಳ್ಳಿ" ಎಂಬ ಸಲಹೆ ನೀಡಿದ್ದಾರೆ.
"ಈ ಆವೃತ್ತಿಯಲ್ಲಿ ಸಿಎಸ್ಕೆ ಉಳಿಯಬೇಕು ಎಂಬ ಆಸೆಯಿದ್ದರೆ, ಮೊದಲು ಹರಾಜಿನಲ್ಲಿ ಕೈಬಿಡಲಾದ ಪೃಥ್ವಿ ಶಾ ಅವರನ್ನು ಫ್ರಾಂಚೈಸಿಗೆ ಸೇರಿಸಿಕೊಳ್ಳುವುದು ಒಳಿತು" ಎಂದು ಶ್ರೀಕಾಂತ್ ತಿಳಿಸಿದ್ದಾರೆ. "ಇಲ್ಲಿಯವರೆಗಿನ ಸೋಲುಗಳಲ್ಲಿ ಇದು ಒಂದು. ಪವರ್ಪ್ಲೇ ಅವಧಿಯಲ್ಲಿ ಟೆಸ್ಟ್ ಪಂದ್ಯಕ್ಕೆ ತರಬೇತಿ ನಡೆಸುವಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಿಮ್ಮ ಚೌಕಟ್ಟಿನಿಂದ ಹೊರಗೆ ಬಂದು ಯೋಚಿಸುವ ಸಮಯವಿದು" ಎಂದು ಎಕ್ಸ್ನಲ್ಲಿ ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).