

ಚೆನ್ನೈ: ಕ್ರಿಕೆಟ್ ದಿಗ್ಗಜ ಎಂಎಸ್ ಧೋನಿ (MS Dhoni) ಮುಂಬರುವ 2026 ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಲಭ್ಯವಿರುತ್ತಾರೋ ಇಲ್ಲವೋ ಎನ್ನುವ ಚರ್ಚೆಗಳಿಗೆ ಸುಳಿವೊಂದು ಸಿಕ್ಕಿದ್ದು, ಅವರು ಆಡುತ್ತಾರೆ ಎನ್ನುವ ವಿಶ್ವಾಸ ಫ್ರಾಂಚೈಸಿಗೆ ಇದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ತಿಳಿಸಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿಶ್ವನಾಥನ್, ಮಹಿ ನಮಗಾಗಿ ಲಭ್ಯವಿರುತ್ತಾರೆ ಮತ್ತು ಆಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಟೂರ್ನಿ ಸಮೀಪಿಸುತ್ತಿರುವಾಗ ವಿಶ್ವನಾಥನ್ ನೀಡಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, 2025 ರ ಐಪಿಎಲ್‌ನಲ್ಲಿ ಸಿಎಸ್‌ಕೆ ಪ್ರದರ್ಶನ ಉತ್ತಮವಾಗಿರಲಿಲ್ಲ. 14 ಪಂದ್ಯವಾಡಿದ್ದ ತಂಡ ಕೇವಲ ನಾಲ್ಕು ಗೆಲುವುಗಳೊಂದಿಗೆ 10 ನೇ ಸ್ಥಾನ ಗಳಿಸಿ ತನ್ನ ಅಭಿಯಾನ ಮುಗಿಸಿತು. ಧೋನಿ ಫಿಟ್ನೆಸ್ ಮತ್ತು ಕೆಲಸದ ಹೊರೆ ನಿರ್ವಹಣೆ ಪ್ರಮುಖ ಪರಿಗಣನೆಗಳಾಗಿಯೇ ಉಳಿದಿದ್ದು. 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ, ಐಪಿಎಲ್‌ನಲ್ಲಿ ಆಡಿಸುವ ಕುರಿತಾಗಿ ಅವರ ದೈಹಿಕ ಸ್ಥಿತಿ ಮತ್ತು ಮೈದಾನದಲ್ಲಿನ ಜವಾಬ್ದಾರಿಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿದೆ.
278 ಐಪಿಎಲ್ ಪಂದ್ಯಗಳನ್ನಾಡಿರುವ ಮಾಹಿ, 38.30 ಸರಾಸರಿಯಲ್ಲಿ 5,439 ರನ್ ಗಳಿಸಿದ್ದಾರೆ ಮತ್ತು ಇದರಲ್ಲಿ 24 ಅರ್ಧಶತಕಗಳು ಸೇರಿದಂತೆ 137.45 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹಿಂದಿನ ಆವೃತ್ತಿಯಲ್ಲಿ 161 ರನ್ ಗಳಿಸಿದ್ದು, 13 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ, ಇದು ಅವರಲ್ಲಿ ಇನ್ನೂ ಕ್ರಿಕೆಟ್‌ನ ಹಸಿವಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
44 ವರ್ಷದ ಧೋನಿ, 2008 ರಲ್ಲಿ ಲೀಗ್ ಆರಂಭವಾದಾಗಿನಿಂದ ಸಿಎಸ್‌ಕೆಯ ಬೆನ್ನೆಲುಬಾಗಿದ್ದ, ಅವರ ನಾಯಕತ್ವದಲ್ಲಿಯೇ ಸಿಎಸ್‌ಕೆ 2010, 2011, 2018, 2021 ಮತ್ತು 2023 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.(ಏಜೆನ್ಸೀಸ್)