

ತಮಿಳುನಾಡು: ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಬಲಿಷ್ಠ ತಂಡ ಹಾಗೂ ಐದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಈ ಫ್ರಾಂಚೈಸಿ ಸೇರುವ ಆಸೆ ಅನೇಕ ಆಟಗಾರರದ್ದು. ಅದಕ್ಕೆ ಮುಖ್ಯ ಕಾರಣ, ಮಹೇಂದ್ರ ಸಿಂಗ್ ಧೋನಿ. ಸಿಎಸ್ಕೆಗೆ ದೊಡ್ಡ ಶಕ್ತಿಯಾಗಿ ನಿಂತಿರುವ 'ಕ್ಯಾಪ್ಟನ್ ಕೂಲ್', ಸತತ ಐದು ಗೆಲುವನ್ನು ತಂದುಕೊಟ್ಟಿರುವ ಹೀರೋ. ಅವರ ತಂಡದಲ್ಲಿ ಆಡುವ ಬಯಕೆ ಹಲವರಿಗಿದ್ದರೆ, ಇನ್ನೊಂದಿಷ್ಟು ಆಟಗಾರರು ಹರಾಜಿನಲ್ಲಿ ಟೀಮ್ ಸೇರುತ್ತಾರೆ. ಪ್ರಸ್ತುತ, ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿರುವ ಸಂಜು ಸ್ಯಾಮ್ಸನ್ ಹೆಸರು ಮುಂಚೂಣಿಯಲ್ಲಿದ್ದು, ಟ್ರೇಡ್ನಲ್ಲಿ ಅವರನ್ನು ಈಗಾಗಲೇ ಸಿಎಸ್ಕೆ ಕರೆದುಕೊಂಡಿದೆ ಎಂಬ ಸುದ್ದಿ ಸದ್ಯ ಕ್ರಿಕೆಟ್ ವಲಯಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಐಪಿಎಲ್ ರಿಟೆನ್ಶನ್ ಪ್ರಕ್ರಿಯೆಗೆ ಡೆಡ್ಲೈನ್ ಸಮೀಪಿಸುತ್ತಿದ್ದಂತೆ ಸಂಜು ಸ್ಯಾಮ್ಸನ್ ಸಿಎಸ್ಕೆ ಬರುವ ವಿಚಾರ ಜೋರಾಗಿದೆ. ಆರ್ಆರ್ ತಂಡ ಅವರನ್ನು ಉಳಿಸಿಕೊಳ್ಳುವ ಬದಲಿಗೆ ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿ ಒಂದೆಡೆಯಾದರೆ, ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಸೇರುವುದು ಖಚಿತ ಎಂಬ ವಿಷಯ ಮತ್ತೊಂದೆಡೆ. ಟ್ರೇಡ್ ಮೂಲಕ ರಾಜಸ್ಥಾನ ರಾಯಲ್ಸ್, ರುತುರಾಜ್ ಗಾಯಕ್ವಾಡ್ ಅಥವಾ ರವೀಂದ್ರ ಜಡೇಜಾ ಕಳಿಸಿಕೊಡಿ, ನಾವು ಸ್ಯಾಮ್ಸನ್ರನ್ನು ಕಳಿಸುತ್ತೇವೆ ಎಂದು ಸಿಎಸ್ಕೆಯೊಂದಿಗೆ ಮಾತಾಡಿಕೊಂಡಿದ್ದಾಗಿ ವರದಿಗಳು ಸೂಚಿಸಿವೆ.
ಕೇವಲ ಸಂಜು ಸ್ಯಾಮ್ಸನ್ ಕುರಿತು ಹರಿದಾಡಿದ ಸಾಕಷ್ಟು ವದಂತಿಗಳ ಬೆನ್ನಲ್ಲೇ ವಿಡಿಯೋ ಮೂಲಕ ವದಂತಿಗಳಿಗೆ ತೆರೆ ಎಳೆದಿರುವ ಚೆನ್ನೈ ಸೂಪರ್ ಕಿಂಗ್ಸ್, ಫ್ರಾಂಚೈಸಿ ಸಿಇಒ ಕಾಸಿ ವಿಶ್ವನಾಥನ್ ಅವರು ಮತ್ತು ಮಾಸ್ಕಟ್ ಲಿಯೋ (ಸಿಂಹದ ಮುಖವಾಡ ಧರಿಸಿದ) ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಟ್ರೇಡ್ ವಿಚಾರಕ್ಕೆ ಹಾಸ್ಯಸ್ಪದವಾಗಿ ಬ್ರೇಕ್ ಹಾಕಿದೆ.
ಇದೆಲ್ಲ ಸುಳ್ಳು ವದಂತಿ ನಂಬಬೇಡಿ ಅನ್ನೋದಕ್ಕೆ ಉದಾಹರಣೆಯಾಗಿ, ಕಾಸಿ ಅವರು ಪ್ರೀತಿ ಜಿಂಟಾ ಅವರು ತಮ್ಮನ್ನು ಪಂಜಾಬ್ ಕಿಂಗ್ಸ್ಗೆ ಟ್ರೇಡ್ ಮಾಡಿಕೊಂಡಿದ್ದಾರೆ ಎಂಬ ಫೋಟೋವನ್ನು ತೋರಿಸಿದರು. ಈ ಮೂಲಕ ಇದೊಂದು ವದಂತಿಯಷ್ಟೇ ಎಂಬುದನ್ನು ಒತ್ತಿ ಹೇಳಿದರು. ಇದಕ್ಕೆ ತಕ್ಕಂತೆ ಸಿಎಸ್ಕೆ, ಟ್ರೇಡ್ ವದಂತಿಗಳು ಮಾನಸಿಕ ಆರೋಗ್ಯಕ್ಕೆ ಕುತ್ತು. ಅಧಿಕೃತ ಘೋಷಣೆಗಾಗಿ ನಿರೀಕ್ಷಿಸಿ ಎಂದು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).