

ನವದೆಹಲಿ: ಐಪಿಎಲ್-14ರಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಗೆಲುವಿನ ಓಟ ಸತತ 5ನೇ ಪಂದ್ಯಕ್ಕೂ ವಿಸ್ತರಿಸಿದೆ. ಆರಂಭಿಕರಾದ ಋತುರಾಜ್ ಗಾಯಕ್ವಾಡ್ (75 ರನ್, 44 ಎಸೆತ, 12 ಬೌಂಡರಿ) ಮತ್ತು ಫಾಫ್ ಡು ಪ್ಲೆಸಿಸ್ (56 ರನ್, 38 ಎಸೆತ, 6 ಬೌಂಡರಿ, 1 ಸಿಕ್ಸರ್) ಭರ್ಜರಿ ಜತೆಯಾಟದ ಬಲದಿಂದ ಸಿಎಸ್‌ಕೆ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ನಡೆದ ತನ್ನ 6ನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಹಾಲಿ ಆವೃತ್ತಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ತಂಡ ನಾಯಕ ಡೇವಿಡ್ ವಾರ್ನರ್ (57 ರನ್, 55 ಎಸೆತ, 3 ಬೌಂಡರಿ, 2 ಸಿಕ್ಸರ್) ಮತ್ತು ಕನ್ನಡಿಗ ಮನೀಷ್ ಪಾಂಡೆ (61 ರನ್, 46 ಎಸೆತ, 5 ಬೌಂಡರಿ, 1 ಸಿಕ್ಸರ್) ಶತಕದ ಜತೆಯಾಟದ ನೆರವಿನಿಂದ 3 ವಿಕೆಟ್‌ಗೆ 171 ರನ್ ಪೇರಿಸಿತು. ಪ್ರತಿಯಾಗಿ ಸಿಎಸ್‌ಕೆ ತಂಡ ಈ ಮೊತ್ತ ಸವಾಲೇ ಅಲ್ಲ ಎನ್ನವಂತೆ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 173 ರನ್ ಗಳಿಸಿ ಜಯಿಸಿತು.
ಸನ್‌ರೈಸರ್ಸ್ ಹೈದರಾಬಾದ್: 3 ವಿಕೆಟ್‌ಗೆ 171 (ಮನೀಷ್ ಪಾಂಡೆ 61, ಡೇವಿಡ್ ವಾರ್ನರ್ 57, ಕೇನ್ ವಿಲಿಯಮ್ಸನ್ 26*, ಕೇದಾರ್ ಜಾಧವ್ 12*, ಲುಂಗಿ ಎನ್‌ಗಿಡಿ 35ಕ್ಕೆ 2, ಸ್ಯಾಮ್ ಕರ‌್ರನ್ 30ಕ್ಕೆ 1), ಚೆನ್ನೈ ಸೂಪರ್ ಕಿಂಗ್ಸ್: 18.3 ಓವರ್ ಗಳಲ್ಲಿ 3 ವಿಕೆಟ್‌ಗೆ 173 (ಋತುರಾಜ್ ಗಾಯಕ್ವಾಡ್ 75, ಫಾಫ್ ಡು ಪ್ಲೆಸಿಸ್ 56, ಮೊಯಿನ್ ಅಲಿ 15, ರವೀಂದ್ರ ಜಡೇಜಾ 7*, ಸುರೇಶ್ ರೈನಾ 17*, ರಶೀದ್ ಖಾನ್ 36ಕ್ಕೆ 3).