ಪುಟಿದೇಳುವ ವಿಶ್ವಾಸದಲ್ಲಿ ಆರ್‌ಸಿಬಿ; ಇಂದು ವಿರಾಟ್ ಕೊಹ್ಲಿ ಬಳಗಕ್ಕೆ ಸಿಎಸ್‌ಕೆ ಸವಾಲು

csk and rcb for web
Published on

ಶಾರ್ಜಾ: ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ ಹಿಂದಿನ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದ್ದ ಆರ್‌ಸಿಬಿ ತಂಡ ಐಪಿಎಲ್-14ರ ಎರಡನೇ ಭಾಗದ ತನ್ನ 2ನೇ ಹಣಾಹಣಿಯಲ್ಲಿ ಸಿಎಸ್‌ಕೆ ತಂಡವನ್ನು ಶುಕ್ರವಾರ ಎದುರಿಸಲಿದೆ. ಕೆಕೆಆರ್ ಎದುರು ಕನಿಷ್ಠ 100ರ ಗಡಿ ದಾಟಲು ವಿಫಲವಾಗಿದ್ದ ವಿರಾಟ್ ಕೊಹ್ಲಿ ಬಳಗ ಹಿಂದಿನ ಪಂದ್ಯದಲ್ಲಿ ಮಾಡಿಕೊಂಡ ಎಡವಟ್ಟುಗಳಿಂದ ಪಾಠಕಲಿತಿದ್ದು, ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. ಅಲ್ಲದೆ, ಮುಂಬೈನಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ 69 ರನ್‌ಗಳಿಂದ ಸಿಎಸ್‌ಕೆ ಎದುರು ಅನುಭವಿಸಿದ ಸೋಲಿಗೂ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಮತ್ತೊಂದೆಡೆ, ಎರಡನೇ ಚರಣದ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಗೆಲುವು ದಾಖಲಿಸಿದ ಎಂಎಸ್ ಧೋನಿ ಸಾರಥ್ಯದ ಬಳಗ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.

* ಆರ್‌ಸಿಬಿ ಪರ ಪುಟಿದೇಳಬೇಕಿದೆ ಸ್ಟಾರ್ಸ್‌

ಮಿಸ್ಟರ್.360 ಖ್ಯಾತಿಯ ಎಬಿ ಡಿವಿಲಿಯರ್ಸ್‌, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದೇವದತ್ ಪಡಿಕಲ್‌ರಂಥ ಸ್ಟಾರ್ ಬ್ಯಾಟ್ಸ್‌ಮನ್‌ಗಳಿದ್ದರೂ ಆರ್‌ಸಿಬಿ ತಂಡ ಮೊದಲ ಪಂದ್ಯದಲ್ಲಿ ಕೆಕೆಆರ್ ಎದುರು ಹೀನಾಯವಾಗಿ ಸೋಲು ಕಂಡಿತ್ತು. ಲೀಗ್ ಹಂತದಲ್ಲಿ ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಜಯ, 3 ಸೋಲುಗಳೊಂದಿಗೆ 10 ಅಂಕ ಕಲೆಹಾಕಿರುವ ಆರ್‌ಸಿಬಿ ಉಳಿದ 6 ಪಂದ್ಯಗಳಲ್ಲಿ ಕನಿಷ್ಠ 3ರಲ್ಲಿ ಗೆದ್ದರೆ ಪ್ಲೇ ಆಫ್ ಹಂತಕ್ಕೇರಲಿದೆ. ಮುಂದಿನ ಪಂದ್ಯಗಳಲ್ಲಿ ಒತ್ತಡ ರಹಿತವಾಗಿ ಆಡುವ ಸಲುವಾಗಿ ಸಿಎಸ್‌ಕೆ ಎದುರು ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಮೊಹಮದ್ ಸಿರಾಜ್, ಹರ್ಷಲ್ ಪಟೇಲ್, ಕೈಲ್ ಜೇಮಿಸನ್, ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್, ಆಲ್ರೌಂಡರ್ ವನಿಂದು ಹಸರಂಗ ಒಳಗೊಂಡ ಬೌಲಿಂಗ್ ಪಡೆ ಕೆಕೆಆರ್ ಎದುರು ಕನಿಷ್ಠ ಪ್ರತಿರೋಧ ತೋರಲು ವಿಫಲವಾಗಿತ್ತು. ಬೌಲಿಂಗ್ ವಿಭಾಗದಲ್ಲಿ ಕೆಲವೊಂದು ಬದಲಾವಣೆಯೊಂದಿಗೆ ಆರ್‌ಸಿಬಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

* ಆತ್ಮವಿಶ್ವಾಸದಲ್ಲಿ ಸಿಎಸ್‌ಕೆ

ಬಲಿಷ್ಠ ಮುಂಬೈ ಎದುರು ಸುಲಭ ಜಯ ದಾಖಲಿಸಿದರೂ ಅನುಭವಿ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಎದ್ದುಕಾಣುತ್ತಿತ್ತು. ಫಾಫ್ ಡು ಪ್ಲೆಸಿಸ್, ಮೊಯಿನ್ ಅಲಿ, ಸುರೇಶ್ ರೈನಾ, ಎಂಎಸ್ ಧೋನಿರಂಥ ಸ್ಟಾರ್ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರೆ, ಆರಂಭಿಕನಾಗಿ ಋತುರಾಜ್ ಗಾಯಕ್ವಾಡ್ ಸಮರ್ಥ ನಿರ್ವಹಣೆ ನೀಡುವ ಮೂಲಕ ತಂಡಕ್ಕೆ ಆಧಾರವಾಗಿದ್ದರು. ಇವರಿಗೆ ಕೆಲಕಾಲ ರವೀಂದ್ರ ಜಡೇಜಾ ಹಾಗೂ ಡ್ವೇನ್ ಬ್ರಾವೊ ಸಾಥ್ ನೀಡಿದ್ದರು. ಮುಂಬೈ ಎದುರು ಕೈಗೆ ಪೆಟ್ಟುತಿಂದು ಕಣದಿಂದ ಹೊರನಡೆದಿದ್ದ ಅಂಬಟಿ ರಾಯುಡು ಸಂಪೂರ್ಣ ಸುಧಾರಿಸಿಕೊಂಡಿದ್ದು, ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪ್ಲೇ-ಆಫ್ ಸನಿಹದಲ್ಲಿರುವ ಸಿಎಸ್‌ಕೆ ತಂಡ ಆರ್‌ಸಿಬಿ ಎದುರು ಜಯಿಸಿದರೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲಿದೆ.

ಟೀಮ್ ನ್ಯೂಸ್:

ಆರ್‌ಸಿಬಿ: ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಬಹುತೇಕ ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಮತ್ತೊಮ್ಮೆ, ಅದೇ ತಂಡದ ಮೇಲೆ ಭರವಸೆ ಇಡಬಹುದು.

ಸಿಎಸ್‌ಕೆ: ಸ್ಯಾಮ್ ಕರ‌್ರನ್ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿದ್ದು, ಹನ್ನೊಂದರ ಬಳಗಕ್ಕೆ ವಾಪಸಾಗುವ ಸಿದ್ಧತೆಯಲ್ಲಿದ್ದಾರೆ. ಕರ‌್ರನ್‌ಗೆ ಮಣೆ ಹಾಕಿದರೆ, ಬ್ರಾವೊ, ಪ್ಲೆಸಿಸ್, ಮೊಯಿನ್ ಅಲಿ, ಹ್ಯಾಸಲ್‌ವುಡ್ ಈ ನಾಲ್ವರಲ್ಲಿ ಒಬ್ಬರು ಹೊರಗುಳಿಯುವುದು ಅನಿವಾರ್ಯ. ಅಂಬಟಿ ರಾಯುಡುಗೆ ವಿಶ್ರಾಂತಿ ಮುಂದುವರಿಸಿದರೆ ಕನ್ನಡಿಗ ರಾಬಿನ್ ಉತ್ತಪ್ಪ ಕಣಕ್ಕಿಳಿಯಬಹುದು.

ಮುಖಾಮುಖಿ: 27, ಆರ್‌ಸಿಬಿ: 9, ಸಿಎಸ್‌ಕೆ: 17 ರದ್ದು: 1.

ಮೊದಲ ಮುಖಾಮುಖಿ: ಆರ್‌ಸಿಬಿಗೆ 69 ರನ್ ಸೋಲು

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪಂದ್ಯ ಆರಂಭ: ರಾತ್ರಿ 7.30ಕ್ಕೆ

* 66: ವಿರಾಟ್ ಕೊಹ್ಲಿ, ಇನ್ನು 66 ರನ್ ಪೇರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ 5ನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಕ್ರಿಸ್ ಗೇಲ್, ಕೈರಾನ್ ಪೊಲ್ಲಾರ್ಡ್, ಶೋಯಿಬ್ ಮಲಿಕ್ ಹಾಗೂ ಡೇವಿಡ್ ವಾರ್ನರ್ ಈ ಹಿಂದಿನ ಸಾಧಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net