ಸೋಲಿನ ಸರಪಳಿ ಕಳಚಿದ ಸಿಎಸ್‌ಕೆ; ಪಂಜಾಬ್ ವಿರುದ್ಧ 10 ವಿಕೆಟ್ ಜಯ

flesis and watson for web
Published on

ದುಬೈ: ಸತತ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-13ರಲ್ಲಿ ಕೊನೆಗೂ ಗೆಲುವಿನ ಹಳಿ ಏರಲು ಯಶಸ್ವಿಯಾಗಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಸಿಎಸ್‌ಕೆ ಪಾಲಿಗೆ ಈ ಗೆಲುವು ಕೊಂಚ ಸಮಾಧಾನ ತಂದುಕೊಟ್ಟರೆ, ಪಂಜಾಬ್ ತಂಡ ಸತತ 3ನೇ ಸೋಲಿನ ರುಚಿ ಕಂಡು ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಕೆಎಲ್ ರಾಹುಲ್ (63 ರನ್, 52 ಎಸೆತ, 7 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 178 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಸಿಎಸ್‌ಕೆ ತಂಡ, ಆರಂಭಿಕರಾದ ಫಾಫ್ ಡು ಪ್ಲೆಸಿಸ್ (87* ರನ್, 53 ಎಸೆತ, 11 ಬೌಂಡರಿ, 1 ಸಿಕ್ಸರ್) ಹಾಗೂ ಶೇನ್ ವ್ಯಾಟ್ಸನ್ (83*ರನ್, 53 ಎಸೆತ, 11 ಬೌಂಡರಿ, 3 ಸಿಕ್ಸರ್) ಜೋಡಿ ಮೊದಲ ವಿಕೆಟ್‌ಗೆ ನಡೆಸಿದ ಅಜೇಯ ಜತೆಯಾಟದ ನೆರವಿನಿಂದ 17.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 181 ರನ್ ಗಳಿಸಿ ಜಯದ ನಗೆ ಬೀರಿತು. ಪ್ರಸಕ್ತ ಆವೃತ್ತಿಯಲ್ಲಿ ರನ್‌ಬರ ಎದುರಿಸುತ್ತಿದ್ದ ಶೇನ್ ವ್ಯಾಟ್ಸನ್ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ತೋರಿದರು. ಇವರಿಗೆ ಪ್ಲೆಸಿಸ್ ಕೂಡ ಅಗತ್ಯ ಸಾಥ್ ನೀಡಿದರು. ಪಂಜಾಬ್ ಬೌಲರ್‌ಗಳನ್ನು ದಂಡಿಸಿದ ಈ ಜೋಡಿ ಯಾವುದೇ ಹಂತದಲ್ಲೂ ಅಪಾಯವಾಗದಂತೆ ಎಚ್ಚರ ವಹಿಸಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಈ ಜೋಡಿ ಸುಲಭ ಗೆಲುವು ದಾಖಲಿಸಲು ನೆರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net