

ಅಬುಧಾಬಿ: ಪ್ಲೇಆಫ್ ಹಂತಕ್ಕೇರಲು ನಿರ್ಣಾಯಕ ಸ್ಥಿತಿಯಲ್ಲಿ ಸಿಲುಕಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರ ತನ್ನ ಕಡೇ ಲೀಗ್ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸತತ 5 ಗೆಲುವಿನ ಬಳಿಕ ರಾಜಸ್ಥಾನ ರಾಯಲ್ಸ್ ಎದುರು ಸೋಲಿಗೆ ಶರಣಾಗಿರುವ ಪಂಜಾಬ್ ಭಾನುವಾರದ ಈ ಮೊದಲ ಕಾದಾಟದಲ್ಲಿ ಗೆದ್ದರಷ್ಟೇ ಪ್ಲೇಆಫ್ ಹಂತಕ್ಕೇರಬಹುದಾಗಿದೆ. ಮೊದಲ ಮುಖಾಮುಖಿಯಲ್ಲಿ ಧೋನಿ ಬಳಗಕ್ಕೆ 10 ವಿಕೆಟ್‌ಗಳಿಂದ ಶರಣಾಗಿದ್ದ ಪಂಜಾಬ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳಿಗೆ ಸೋಲಿನ ಪೆಟ್ಟುಕೊಟ್ಟಿರುವ ಸಿಎಸ್‌ಕೆ, ಹ್ಯಾಟ್ರಿಕ್ ಗೆಲುವಿನೊಂದಿಗೆ ಲೀಗ್‌ಗೆ ವಿದಾಯ ಹೇಳುವ ಹಂಬಲದಲ್ಲಿದೆ.
* ಒತ್ತಡದಲ್ಲಿ ಪಂಜಾಬ್ ಕಿಂಗ್ಸ್ ಇಲೆವೆನ್
ಲೀಗ್‌ನಲ್ಲಿ ಇದುವರೆಗೂ ಆಡಿರುವ 13 ಪಂದ್ಯಗಳಲ್ಲಿ 6 ಜಯ, 7ರಲ್ಲಿ ಸೋಲನುಭವಿಸಿರುವ ಕೆಎಲ್ ರಾಹುಲ್ ಬಳಗ 12 ಅಂಕ ಹೊಂದಿದೆ. ಇತರ ಪಂದ್ಯಗಳ ಫಲಿತಾಂಶಕ್ಕಿಂತ ಸಿಎಸ್‌ಕೆ ತಂಡವನ್ನು ಸೋಲಿಸಿದರಷ್ಟೇ ಕನಿಷ್ಠ 4ನೇ ತಂಡವಾಗಿ ಪ್ಲೇ-ಆಫ್ ಹಂತಕ್ಕೇರುವ ಗುರಿ ಹೊಂದಿದೆ. ಮತ್ತೊಂದೆಡೆ, ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವ ಧೋನಿ ಬಳಗ ತನ್ನೊಂದಿಗೆ ಪಂಜಾಬ್ ತಂಡವನ್ನು ಹೊರಹಾಕುವ ಅವಕಾಶ ಹೊಂದಿದೆ. ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ.
* ಟೀಮ್ ನ್ಯೂಸ್
ಪಂಜಾಬ್ ತಂಡ
ಸತತ 5 ಗೆಲುವಿನ ಬಳಿಕ ಸೋಲು ಕಂಡಿರುವ ರಾಹುಲ್ ಬಳಗದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ. ಕನ್ನಡಿಗ ಮಯಾಂಕ್ ಅಗರ್ವಾಲ್ ಲಭ್ಯತೆ ಇನ್ನು ಖಚಿತಗೊಂಡಿಲ್ಲ. ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ.
ಸಂಭಾವ್ಯ ತಂಡ: ರಾಹುಲ್ (ವಿಕೀ, ನಾಯಕ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಮ್ಯಾಕ್ಸ್‌ವೆಲ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಎಂ.ಅಶ್ವಿನ್, ರವಿ ಬಿಷ್ಣೋಯಿ, ಮೊಹಮದ್ ಶಮಿ, ಅರ್ಷದೀಪ್ ಸಿಂಗ್.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್ ಸೋಲು
ಸಿಎಸ್‌ಕೆ:
ಪಂದ್ಯದಿಂದ ಪಂದ್ಯಕ್ಕೆ ಕೆಲವೊಂದು ಬದಲಾವಣೆ ಮಾಡಿಕೊಂಡು ಬರುತ್ತಿರುವ ಸಿಎಸ್‌ಕೆ, ಈ ಪಂದ್ಯದಲ್ಲೂ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಲೀಗ್‌ನಲ್ಲಿ ಇದುವರೆಗೂ ಆಡದವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಸಂಭಾವ್ಯ ತಂಡ: ಶೇನ್ ವ್ಯಾಟ್ಸನ್/ಪ್ಲೆಸಿಸ್, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೀ), ಸ್ಯಾಮ್ ಕರ‌್ರನ್, ಆರ್.ಜಡೇಜಾ, ಎನ್.ಜಗದೀಶನ್, ಮಿಚೆಲ್ ಸ್ಯಾಂಟ್ನರ್, ಕರ್ಣ್ ಶರ್ಮ, ದೀಪಕ್ ಚಹರ್, ಲುಂಗ್ ಎನ್‌ಗಿಡಿ.
ಕಳೆದ ಪಂದ್ಯ: ಕೆಕೆಆರ್ ಎದುರು 6 ವಿಕೆಟ್ ಜಯ
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 22, ಸಿಎಸ್‌ಕೆ: 13, ಪಂಜಾಬ್: 9.