

ದುಬೈ: ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಉಳಿಸಿಕೊಳ್ಳುವ ಹಂಬಲದಲ್ಲಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್-14ರ ತನ್ನ ಕಡೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಗುರುವಾರ ಎದುರಿಸಲಿದೆ. ಹಿಂದಿನ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋಲನುಭವಿಸಿದ ಸಿಎಸ್‌ಕೆ ತಂಡ 2ನೇ ಸ್ಥಾನಕ್ಕಿಳಿದಿದೆ. ಇದೀಗ ಮರಳಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ. ಇದರಿಂದ ತಂಡಕ್ಕೆ ಕನಿಷ್ಠ ಟಾಪ್-2 ಸ್ಥಾನ ಖಚಿತವಾಗಲಿದ್ದು, 1ನೇ ಕ್ವಾಲಿಫೈಯರ್‌ಗೆ ಅರ್ಹತೆ ಗಳಿಸಲಿದೆ.
ಅರಬ್ ನಾಡಿನಲ್ಲಿ ಆರಂಭಿಕ ನಾಲ್ಕು ಪಂದ್ಯಗಳಲ್ಲೂ ಜಯ ದಾಖಲಿಸಿದ್ದ ಸಿಎಸ್‌ಕೆ, ಬಳಿಕ ಕಡೇ ಎರಡು ಹಣಾಹಣಿಯಲ್ಲಿ ಸೋಲನುಭವಿಸಿದೆ. ಇದೀಗ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಧೋನಿ ಬಳಗ ಗೆಲುವಿನ ಹಳಿಗೇರುವ ತವಕದಲ್ಲಿದೆ. ಮತ್ತೊಂದೆಡೆ, ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ಗೆಲುವಿನೊಂದಿಗೆ ಟೂರ್ನಿಗೆ ಗೆಲುವಿನ ಗುಡ್‌ಬೈ ಹೇಳುವ ಕನಸಿನಲ್ಲಿದೆ.
ಮುಖಾಮುಖಿ: 24, ಸಿಎಸ್‌ಕೆ: 15, ಪಂಜಾಬ್: 9
ಹಿಂದಿನ ಮುಖಾಮುಖಿ: ಸಿಎಸ್‌ಕೆಗೆ 6 ವಿಕೆಟ್ ಜಯ
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್