

ದುಬೈ: ಆರಂಭಿಕ ಋತುರಾಜ್ ಗಾಯಕ್ವಾಡ್ (88*ರನ್, 58 ಎಸೆತ, 9 ಬೌಂಡರಿ, 4 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಹಾಗೂ ವೇಗಿಗಳ ಕರಾರುವಾಕ್ ದಾಳಿ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾನುವಾರ ಅರಬ್ ನಾಡಿನಲ್ಲಿ ಪುನರಾರಂಭಗೊಂಡ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 20 ರನ್‌ಗಳಿಂದ ಸೋಲಿಸಿತು. ಇದರಿಂದ ಎಂಎಸ್ ಧೋನಿ ಸಾರಥ್ಯದ ಸಿಎಸ್‌ಕೆ, ಹಾಲಿ ಚಾಂಪಿಯನ್ ತಂಡದೆದುರು ಮೊದಲ ಹಣಾಹಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ದುಬೈ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡ, ಆರಂಭಿಕ ಆಘಾತದ ನಡುವೆಯೂ 6 ವಿಕೆಟ್‌ಗೆ 156 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡ ಸೌರಭ್ ತಿವಾರಿ (50*ರನ್, 40 ಎಸೆತ, 5 ಬೌಂಡರಿ) ಅರ್ಧಶತಕದ ಹೋರಾಟದ ನಡುವೆಯೂ 8 ವಿಕೆಟ್‌ಗೆ 136 ರನ್‌ಗಳಿಸಲಷ್ಟೇ ಶಕ್ತವಾಯಿತು.
ಸಿಎಸ್‌ಕೆ: 6 ವಿಕೆಟ್‌ಗೆ 156 (ಋತುರಾಜ್ ಗಾಯಕ್ವಾಡ್ 88*,ರವೀಂದ್ರ ಜಡೇಜಾ 26, ಬ್ರಾವೊ 23, ಬೌಲ್ಟ್ 35ಕ್ಕೆ 2, ಮಿಲ್ನೆ 21ಕ್ಕೆ 2, ಬುಮ್ರಾ 33ಕ್ಕೆ 2), ಮುಂಬೈ ಇಂಡಿಯನ್ಸ್: 8 ವಿಕೆಟ್‌ಗೆ 136 (ಸೌರಭ್ ತಿವಾರಿ 50*, ಕೈರಾನ್ ಪೊಲ್ಲಾರ್ಡ್ 15, ದೀಪಕ್ ಚಹರ್ 19ಕ್ಕೆ 2)