ಇಂದು ಸಿಎಸ್‌ಕೆ- ಡೆಲ್ಲಿ ಮೊದಲ ಕ್ವಾಲಿಫೈಯರ್ ಹಣಾಹಣಿ

CSK AND DC MATCH PREVIEW.jpg web
Published on

ದುಬೈ: ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-14ರ ಕ್ವಾಲಿಫೈಯರ್-1 ಹಣಾಹಣಿಯಲ್ಲಿ ಭಾನುವಾರ ಎದುರಾಗಲಿವೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಕದನದಲ್ಲಿ ಜಯ ದಾಖಲಿಸಿದ ತಂಡ ನೇರವಾಗಿ ಪ್ರಶಸ್ತಿ ಸುತ್ತಿಗೇರಿದರೆ, ಸೋತ ತಂಡಕ್ಕೂ ಫೈನಲ್ ಪ್ರವೇಶಿಸಲು ಎರಡನೇ ಕ್ವಾಲಿಫೈಯರ್ ಮೂಲಕ ಮತ್ತೊಂದು ಅವಕಾಶ ಲಭಿಸಲಿದೆ. ಅರಬ್‌ನಾಡಿನಲ್ಲಿ ಆರಂಭಗೊಂಡ ಲೀಗ್‌ನ ಎರಡನೇ ಭಾಗದಲ್ಲಿ ಆಡಿದ ಆರಂಭೀಕ ನಾಲ್ಕು ಪಂದ್ಯಗಳಲ್ಲಿ ಜಯ ದಾಖಲಿಸಿದ್ದ ಸಿಎಸ್‌ಕೆ, ಬಳಿಕ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ. ಮತ್ತೊಂದೆಡೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ. ಲೀಗ್ ಹಂತದಲ್ಲಿ ಡೆಲ್ಲಿ ಎದುರು ಎರಡೂ ಮುಖಾಮುಖಿಯಲ್ಲಿ ಸೋಲನುಭವಿಸಿರುವ ಸಿಎಸ್‌ಕೆ ಸೇಡು ತೀರಿಸಿಕೊಳ್ಳುವ ಮೂಲಕ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ.

* ಪುಟಿದೇಳುವ ವಿಶ್ವಾಸದಲ್ಲಿ ಸಿಎಸ್‌ಕೆ

11ನೇ ಬಾರಿಗೆ ಪ್ಲೇಆಫ್ ಪ್ರವೇಶಿಸುವ ಮೂಲಕ ದಾಖಲೆ ಬರೆದಿರುವ ಎಂಎಸ್ ಧೋನಿ ಸಾರಥ್ಯದ ಸಿಎಸ್‌ಕೆ ತಂಡ ಕಳೆದ ವರ್ಷ ಯುಎಇಯಲ್ಲೆ ನಡೆದ ಲೀಗ್‌ನಲ್ಲಿ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು. ಇದೀಗ ಎರಡು ವರ್ಷಗಳ ಬಳಿಕ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ. ಜತೆಗೆ 9ನೇ ಬಾರಿಗೆ ಫೈನಲ್ ಪ್ರವೇಶಿಸುವ ಕನಸಿನಲ್ಲಿದೆ. 2019ರಲ್ಲಿ ಕಡೇ ಬಾರಿಗೆ ಸಿಎಸ್‌ಕೆ ಫೈನಲ್ ಪ್ರವೇಶಿಸಿತ್ತು. ಸಿಎಸ್‌ಕೆ ಲೀಗ್ ಹಂತದಲ್ಲಿ 14 ಪಂದ್ಯಗಳಿಂದ 9 ಜಯ, 5ರಲ್ಲಿ ಸೋತು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಸಿಎಸ್‌ಕೆ ಪಾಲಿನ 12ನೇ ಐಪಿಎಲ್‌ನಲ್ಲಿ 11ನೇ ಬಾರಿಗೆ ಪ್ಲೇಆಫ್ ಹಂತಕ್ಕೇರುವ ಮೂಲಕ ದಾಖಲೆ ನಿರ್ಮಿಸಿದೆ. ಆರಂಭಿಕರಾದ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಹೊರತುಪಡಿಸಿದರೆ, ಅನುಭವಿ ಬ್ಯಾಟ್ಸ್‌ಮನ್‌ಗಳು ಒಳಗೊಂಡ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ನಿರ್ವಹಣೆ ಕಂಡುಬರುತ್ತಿಲ್ಲ. ವೇಗದ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ಜೋಸ್ ಹ್ಯಾಸಲ್‌ವುಡ್ ಗಮನಸೆಳೆಯುತ್ತಿದ್ದರೂ ದೀಪಕ್ ಚಹರ್ ಕೊಂಚ ದುಬಾರಿಯಾಗುತ್ತಿದ್ದಾರೆ.

* ಡೆಲ್ಲಿಗೆ ಗೆಲುವಿನ ತವಕ

ಲೀಗ್ ಹಂತದಲ್ಲಿ ಕಡೇ ಪಂದ್ಯದಲ್ಲಿ ಆರ್‌ಸಿಬಿ ಎದುರು ಮುಗ್ಗರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. ಲೀಗ್ ಹಂತದಲ್ಲಿ 10 ಗೆಲುವು ದಾಖಲಿಸಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಪೃಥ್ವಿ ಷಾ (401ರನ್), ಶಿಖರ್ ಧವನ್ (544) ಆರಂಭಿಕ ಹಂತದಲ್ಲಿ ಉತ್ತಮ ನೆರವಾಗುತ್ತಿದ್ದಾರೆ. ಶ್ರೇಯಸ್ ಅಯ್ಯರ್, ರಿಷಭ್ ಮಧ್ಯಮ ಕ್ರಮಾಂಕದಲ್ಲಿ ಮತ್ತಷ್ಟು ಪರಿಣಾಕಾರಿಯಾಗಿ ಬ್ಯಾಟಿಂಗ್ ಮಾಡಬೇಕಿದೆ. ಉತ್ತಮ ಆರಂಭದ ನಡುವೆಯೂ ಮಧ್ಯಮ ಕ್ರಮಾಂಕ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ಪ್ಲೇಆಫ್ ಹಂತಕ್ಕೆ ಲಭ್ಯರಾಗುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ಹೆಚ್ಚಿಸಿದೆ. ಜತೆಗೆ ಬೌಲಿಂಗ್‌ನಲ್ಲೂ ಸಹಕಾರಿಯಾಗಬಲ್ಲರು. ವೇಗಿಗಳಾದ ಆವೇಶ್ ಖಾನ್ (22 ವಿಕೆಟ್) ಕಗಿಸೊ ರಬಾಡ (13ವಿಕೆಟ್), ಅನ್ರಿಚ್ ನೋಕಿಯ ಒಳಗೊಂಡ ಮೂವರು ವೇಗಿಗಳು ಎದುರಾಳಿ ತಂಡಕ್ಕೆ ದುಸ್ವಪ್ನವಾಗಬಲ್ಲರು. ತ್ರಿಮೂರ್ತಿ ವೇಗಿಗಳಿಗೆ ಅಕ್ಷರ್ ಪಟೇಲ್ ಕೂಡ ಸಾಥ್ ನೀಡುತ್ತಿದ್ದಾರೆ.

ಟೀಮ್ ನ್ಯೂಸ್:

ಡೆಲ್ಲಿ ಕ್ಯಾಪಿಟಲ್ಸ್: ಕಡೇ ಲೀಗ್ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಮಾರ್ಕಸ್ ಸ್ಟೋಯಿನಿಸ್ ಫಿಟ್ ಆಗಿದ್ದು, ರಿಪಾಲ್ ಪಟೇಲ್ ಬದಲಿಗೆ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಸಿಎಸ್‌ಕೆ: ಸಿಎಸ್‌ಕೆ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ. ಸುರೇಶ್ ರೈನಾ ಫಿಟ್ ಆದರೆ ರಾಬಿನ್ ಉತ್ತಪ್ಪ ಬದಲಿಗೆ ಕಣಕ್ಕಿಳಿಯಲಿದ್ದಾರೆ.

ಮುಖಾಮುಖಿ: 25, ಡೆಲ್ಲಿ ಕ್ಯಾಪಿಟಲ್ಸ್: 10, ಚೆನ್ನೈ ಸೂಪರ್ ಕಿಂಗ್ಸ್ : 15

ಲೀಗ್ ಹಣಾಹಣಿ: ಎರಡೂ ಪಂದ್ಯಗಳಲ್ಲೂ ಡೆಲ್ಲಿ ತಂಡಕ್ಕೆ ಜಯ

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net