ಸಂಕಷ್ಟದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್

csa and sascos for bwe
Published on

ಜೋಹಾನ್ಸ್‌ಬರ್ಗ್: ದುರಾಡಳಿತ ಹಾಗೂ ಭ್ರಷ್ಟಾಚಾರದಿಂದ ತತ್ತರಿಸಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮಂಡಳಿಯನ್ನು ವಜಾಗೊಳಿಸಿರುವ ಸೌತ್ ಆಫ್ರಿಕನ್ ಸ್ಪೋರ್ಟ್ಸ್ ಕಾನ್ಫೆಡರೇಷನ್ ಆ್ಯಂಡ್ ಒಲಿಂಪಿಕ್ ಕಮಿಟಿ (ಎಸ್‌ಎಎಸ್‌ಸಿಒಸಿ) ಅದರ ಆಡಳಿತವನ್ನು ತಾನು ವಹಿಸಿಕೊಂಡಿದೆ. ಇದರಿಂದಾಗಿ ಸಿಎಸ್‌ಎ ಹಾಗೂ ತಂಡದ ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಉಂಟಾಗಿದ್ದು, ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ಕೂಡ ಮಸುಕಾಗಿದೆ. ಸಿಎಸ್‌ಎ ಹಂಗಾಮಿ ಸಿಇಒ ಕುಗಾಂಡ್ರೀ ಗೊವೆಂಡರ್‌ಗೆ ಹುದ್ದೆ ತ್ಯಜಿಸುವಂತೆ ಸೂಚಿಸಲಾಗಿದ್ದು, ಭ್ರಷ್ಟಾಚಾರದ ಕುರಿತು ತನಿಖಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ಮಂಗಳವಾರ ನಡೆದ ಎಸ್‌ಎಎಸ್‌ಸಿಒಸಿ ಸಭೆಯಲ್ಲಿ ಸಿಎಸ್‌ಎ ದುರಾಡಳಿತದ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದ್ದು, ಕ್ರಿಕೆಟ್ ಆಟಕ್ಕೆ ಕಳಂಕ ತಂದಿದೆ ಎಂದು ದೂರಲಾಗಿದೆ.

ಸಿಎಸ್‌ಎ ಮಾಜಿ ಸಿಇಒ ಥಬಾಂಗ್ ಮೊನ್ರೊ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಕಳೆದ ತಿಂಗಳು ವಜಾಗೊಳಿಸಲಾಗಿತ್ತು. ಬಳಿಕ ಹಂಗಾಮಿ ಸಿಇಒ ಆಗಿ ನೇಮಕಗೊಂಡಿದ್ದ ಜಾಕ್ಸ್ ೌಲ್ ಹಾಗೂ ಅಧ್ಯಕ್ಷ ಕ್ರೀಸ್ ನೆನ್‌ಜಾನಿ ಕೂಡ ಕಳೆದ ತಿಂಗಳೇ ರಾಜೀನಾಮೆ ನೀಡಿದ್ದರು. ನಂತರ ಹಂಗಾಮಿ ಸಿಇಒ ಆಗಿ ಕುಗಾಂಡ್ರೀ ಗೊವೆಂಡರ್ ನೇಮಕಗೊಂಡಿದ್ದರು. ಸೆಪ್ಟೆಂಬರ್ 5 ರಂದು ನಿಗದಿಯಾಗಿದ್ದ ವಾರ್ಷಿಕ ಮಹಾಸಭೆಯನ್ನು ಮುಂದೂಡಿದ್ದಕ್ಕೆ ದೇಶದ ಎಲೈಟ್ ಆಟಗಾರರು ಸಿಎಸ್‌ಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

* ಸಿಎಸ್‌ಎ ಕಿಡಿ

ಎಸ್‌ಎಎಸ್‌ಸಿಒಸಿ ನಿರ್ಧಾರದ ವಿರುದ್ಧ ಕ್ರಿಕೆಟ್ ದಕ್ಷಿಣ ಆಫ್ರಿಕಾ ಕಿಡಿಕಾರಿದೆ. ಎಸ್‌ಎಎಸ್‌ಸಿಒಸಿ ತೆಗೆದುಕೊಂಡಿರುವ ನಿರ್ಣಯವನ್ನು ಒಪ್ಪಲು ಸಾಧ್ಯವಿಲ್ಲ. ಈ ಕುರಿತು ಕಾನೂನು ಸಲಹೆ ಪಡೆಯಲಾಗುವುದು ಎಂದು ಸಿಎಸ್‌ಎ ಪ್ರಕಟಣೆಯಲ್ಲಿ ತಿಳಿಸಿದೆ. ಸಿಎಸ್‌ಎ ವ್ಯವಹಾರದಲ್ಲಿ ಎಸ್‌ಎಎಸ್‌ಸಿಒಸಿ ಮಧ್ಯ ಪ್ರವೇಶಿಸಿರುವುದು ಎಷ್ಟು ಸರಿ. ಕ್ರಿಕೆಟ್ ಹಿತದೃಷ್ಟಿಯಿಂದ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದೆ.

* ಎಸ್‌ಎಎಸ್‌ಸಿಒಸಿ ಸ್ಪಷ್ಟನೆ

ಸಿಎಸ್‌ಎ ಆಡಳಿತದ ವಿರುದ್ಧ ವ್ಯಾಪಕವಾದ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸುವುದು ಅನಿವಾರ್ಯವಾಯಿತು. ಸಮರ್ಪಕ ತನಿಖೆಯ ಅಗತ್ಯವಿದೆ ಎಂದು ಎಸ್‌ಎಎಸ್‌ಸಿಒಸಿ ಸ್ಪಷ್ಟಪಡಿಸಿದೆ. ಘಟನೆ ಕುರಿತು ಕಾಳಜಿಹೊಂದಿದ್ದು, ಸಿಎಸ್‌ಎ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಎಸ್‌ಎಎಸ್‌ಸಿಒಸಿ ಹಂಗಾಮಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿ ಗೊವೆಂಡೆರ್ ತಿಳಿಸಿದ್ದಾರೆ. ಈ ಕುರಿತು ಚರ್ಚಿಸಲೆಂದೇ ಸಿಎಸ್‌ಎ ಅಧಿಕಾರಿಗಳು ಸೋಮವಾರ ಭೇಟಿಯಾಗಲಿದ್ದಾರೆ. ನಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ.

* ಸ್ಪಷ್ಟನೆ ಕೇಳಲಿರುವ ಐಸಿಸಿ

ಘಟನೆಗೆ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯೂ (ಐಸಿಸಿ) ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಸ್ಪಷ್ಟನೆ ಕೇಳುವ ಸಾಧ್ಯತೆಗಳಿವೆ. ಐಸಿಸಿ ಕಾನೂನು 2.4 ನಿಯಮದಂತೆ, ಐಸಿಸಿ ಸದಸ್ಯ ರಾಷ್ಟ್ರಗಳು ಸ್ವಾಯತತ್ತೆ ಹೊಂದಿದ್ದು, ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಗಳು ಹಸ್ತಕ್ಷೇಪ್ತ ಮಾಡುವಂತಿಲ್ಲ. ಎಸ್‌ಎಎಸ್‌ಸಿಒಸಿ ಕೂಡ ಸರ್ಕಾರದ ಸಂಸ್ಥೆಯಲ್ಲ, ಅದೊಂದು ಸಾರ್ವಜನಿಕ ಸಂಸ್ಥೆ ಎಂದು ಐಸಿಸಿ ಮಾಜಿ ಕಾನೂನು ಸಲಹೆಗಾರರಾರೊಬ್ಬರು ತಿಳಿಸಿದ್ದಾರೆ. ಒಟ್ಟಾರೆ. ಐಸಿಸಿ ಕೂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೆಳವಳಿಗೆಗಳ ಮೇಲೆ ಕಣ್ಣಿಟ್ಟಿದೆ.

* ಘಟನೆ ಹಿನ್ನೆಲೆ..

ಕಳೆದ ಒಂದು ವರ್ಷದಿಂದ ಅದರಲ್ಲೂ 2019ರ ಡಿಸೆಂಬರ್‌ನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಡಳಿತ ಮಂಡಳಿ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದರಿಂದ, ಗೊಂದಲದ ವಾತಾವರಣ ಉಂಟಾಗಿತ್ತು. ಪ್ರಮುಖವಾಗಿ ವರ್ಣಭೇದ, ವೇತನ ಹಾಗೂ ಭ್ರಷ್ಟಾಚಾರ ವಿಷಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಪರಿಹಾರ ಕಂಡುಕೊಳ್ಳಲು ಆಡಳಿತ ಮಂಡಳಿ ಮಟ್ಟದಲ್ಲೂ ಉತ್ತಮ ವಾತಾವರಣ ಇರಲಿಲ್ಲ. ಒಂದೇ ವರ್ಷದಲ್ಲಿ ಮೂವರು ಸಿಇಒಗಳು ಬದಲಾಗಿದ್ದರು.

* ದಕ್ಷಿಣ ಆಫ್ರಿಕಾ ತಂಡಕ್ಕೆ ವಜಾ ಭೀತಿ ?

ಐಸಿಸಿ ನಿಯಮದ ಪ್ರಕಾರ, ಸರ್ಕಾರಗಳು ದೈನಂದಿನ ಕ್ರಿಕೆಟ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಇಂಥ ಪರಿಸ್ಥಿತಿ ಇದ್ದುದರಿಂದಲೇ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ಕೂಡ ಕೆಲಕಾಲ ನಿಷೇಧಕ್ಕೆ ಒಳಗಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಲ್ಲೂ ಸರ್ಕಾರದ ಹಸ್ತಕ್ಷೇಪ ಕಂಡುಬಂದಿದೆ. ಈ ಕಾರಣಕ್ಕಾಗಿ ಅದು ನಿಷೇಧಕ್ಕೆ ಒಳಗಾದಲ್ಲಿ, ಎರಡನೇ ಬಾರಿಗೆ ಶಿಕ್ಷೆಗೊಳಗಾದ ಅಪಖ್ಯಾತಿಗೆ ಸಿಲುಕಲಿದೆ. ಇದಕ್ಕೂ ಮೊದಲು ವರ್ಣಭೇದ ನೀತಿಯಿಂದಾಗಿ 1970ರಿಂದ 1991 ರವರೆಗೆ ಅದು ನಿಷೇಧಕ್ಕೊಳಗಾಗಿತ್ತು.

* ಏನಿದು ಎಸ್‌ಎಎಸ್‌ಸಿಒಸಿ..?

ಸೌತ್ ಆಫ್ರಿಕನ್ ಸ್ಪೋರ್ಟ್ಸ್ ಕಾನ್ಫೆಡರೇಷನ್ ಆ್ಯಂಡ್ ಒಲಿಂಪಿಕ್ಸ್ ಕಮಿಟಿ (ಎಸ್‌ಎಎಸ್‌ಸಿಒಸಿ) ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಎನ್‌ಒಸಿ) ಹಾಗೂ ರಾಷ್ಟ್ರೀಯ ಪ್ಯಾರಾಲಂಪಿಕ್ ಸಮಿತಿ (ಎನ್‌ಪಿಸಿ) ಸಂಸ್ಥೆಯಾಗಿದೆ. ಜತೆಗೆ ದಕ್ಷಿಣಾ ಆಫ್ರಿಕಾದ ಕಾಮನ್ವೆಲ್ತ್ ಗೇಮ್ಸ್‌ಗಳ ಜವಾಬ್ದಾರಿ ಹೊಂದಿದೆ. ದೇಶದ ಕ್ರೀಡೆಗಳ ಹೈಪಾರ್ಮೆನ್ಸ್‌ನ ಜವಾಬ್ದಾರಿಯೂ ಇದ್ದರದ್ದೇ ಆಗಿದೆ. ಅಂತಾರಾಷ್ಟ್ರೀಯ ಕ್ರೀಡಾ ೆಡರೇಷನ್‌ಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಸ್ಪೋರ್ಟಿಂಗ್ ಓಬುಂಡ್ಸ್‌ಮನ್ ಮಾದರಿಯಲ್ಲಿ ಕ್ರೀಡಾಸಚಿವಾಲಯ ಇದನ್ನು ಸ್ಥಾಪಿಸಿದೆ. ಜತೆಗಿದು ಸರ್ಕಾರದ ಉನ್ನತ ಸಂಸ್ಥೆಯಾಗಿದೆ.

*ಐಪಿಎಲ್ ಪಾಲ್ಗೊಳ್ಳುವಿಕೆ ಮೇಲೆ ಕರಿನೆರಳು?

ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ವಜಾಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವಿಕೆ ಮೇಲೂ ಕರಿನೆರಳು ಬೀಳುತ್ತಾ ಎಂಬ ಆತಂಕ ಎದುರಾಗಿತ್ತು. ಆದರೆ ಇಂಥ ಆತಂಕಕ್ಕೆ ಕಾರಣವಿಲ್ಲ. ಒಟ್ಟಾರೆ, ಈ ಪರಿಣಾಮದಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಆಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಕರೊನಾ ವೈರಾಣು ಸೋಂಕಿನ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸದ್ಯ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಆಡುತ್ತಿಲ್ಲ. ಈ ಕಾರಣಕ್ಕಾಗಿ ಅದರ ದೇಶಿಯ ಟೂರ್ನಿಗಳ ಮೇಲೂ ಕರಿಛಾಯೆ ಹಬ್ಬಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ 2020-21ರ ದೇಶೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಗಳ ವೇಳಾಪಟ್ಟಿ ಪ್ರಕಟಿಸದಿರುವುದು ಇದನ್ನು ಖಚಿತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net