

ನವದೆಹಲಿ: ಲಾಕ್ಡೌನ್ ನಡುವೆಯೂ ಬಿಸಿಸಿಐ ತನ್ನೆಲ್ಲ ಗುತ್ತಿಗೆ ಕ್ರಿಕೆಟಿಗರಿಗೆ ಸಂಭಾವನೆ ಪಾವತಿ ಮಾಡಿದೆ. ಜತೆಗೆ, ಕರೊನಾ ಮಹಾಮಾರಿಯಿಂದಾಗಿ ಉಂಟಾಗಿರುವ ಜಾಗತಿಕ ಆರ್ಥಿಕ ಸಂಕಷ್ಟದ ನಡುವೆಯೂ ದೇಶದ ಯಾವುದೇ ಕ್ರಿಕೆಟಿಗರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ನೀಡಿದೆ.
ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿರುವುದರಿಂದ ಈಗಾಗಲೆ ಫುಟ್ಬಾಲ್ ಮತ್ತಿತರ ಕ್ರೀಡೆಗಳಲ್ಲಿ ಆಟಗಾರರ ವೇತನ ಕಡಿತವಾಗುತ್ತಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳೂ ಆಟಗಾರರ ವೇತನ ಕಡಿತದ ಬಗ್ಗೆ ಚಿಂತನೆ ನಡೆಸಿವೆ. ಆದರೆ ಬಿಸಿಸಿಐ ಆರ್ಥಿಕವಾಗಿ ಬಲಿಷ್ಠವಾಗಿರುವುದರಿಂದ ಯಾವುದೇ ಕ್ರಿಕೆಟಿಗರಿಗೆ ಹಣಕಾಸಿನ ತೊಂದರೆಯಾಗಲು ಬಿಡುವುದಿಲ್ಲ ಎಂದಿದೆ.
‘ಮಾರ್ಚ್ 24ರಿಂದ ಇಡೀ ದೇಶವೇ ಲಾಕ್ಡೌನ್ನಲ್ಲಿದ್ದರೂ ಬಿಸಿಸಿಐ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಕೇಂದ್ರ ಗುತ್ತಿಗೆಯಲ್ಲಿರುವ ಎಲ್ಲ ಕ್ರಿಕೆಟಿಗ ರಿಗೂ ಮಂಡಳಿಯಿಂದ ತ್ರೖೆಮಾಸಿಕ ಸಂಭಾವನೆ ಯನ್ನು ಪಾವತಿ ಮಾಡಲಾಗಿದೆ. ಅಲ್ಲದೆ ಭಾರತ ಮತ್ತು ಭಾರತ ಎ ತಂಡಗಳ ಪರ ಆಡಿರುವ ಎಲ್ಲ ಆಟಗಾರರ ಪಂದ್ಯ ಸಂಭಾವನೆಗಳನ್ನೂ ಕಳೆದ ವಿತ್ತ ವರ್ಷದ ಅಂತ್ಯಕ್ಕೆ ಪಾವತಿ ಮಾಡಲಾಗಿದೆ’ ಎಂದು ಬಿಸಿಸಿಐ ಅಧಿಕಾರಿ ವಿವರಿಸಿದ್ದಾರೆ.
ಇತರ ಕೆಲ ಕ್ರಿಕೆಟ್ ಮಂಡಳಿಗಳು ದೇಶೀಯ ಕ್ರಿಕೆಟಿಗರಿಗೂ ವೇತನ ನೀಡಲು ಪರದಾಡುತ್ತಿದ್ದರೆ ಬಿಸಿಸಿಐ ಎಲ್ಲ ಆರ್ಥಿಕ ಸವಾಲುಗಳನ್ನು ಎದುರಿಸಲು ಸಶಕ್ತವಾಗಿದೆ. ಬಿಸಿಸಿಐ ಅಂತಾರಾಷ್ಟ್ರೀಯ ಮಾತ್ರವಲ್ಲದೆ ದೇಶೀಯ ಕ್ರಿಕೆಟಿಗ ರಿಗೂ ಆರ್ಥಿಕ ಸಮಸ್ಯೆಯಾಗದು ಎಂದಿದೆ.
ದೇಶೀಯ ಕ್ರಿಕೆಟ್ ಮುಂದಕ್ಕೆ?: ಬಿಸಿಸಿಐ ನಿಯಮದ ಪ್ರಕಾರ ದೇಶೀಯ ಕ್ರಿಕೆಟ್ ನಡೆಯುವ ಸಮಯದಲ್ಲಿ ಐಪಿಎಲ್ ಆಯೋಜಿಸುವಂತಿಲ್ಲ. ಸಾಮಾನ್ಯವಾಗಿ ಅಕ್ಟೋಬರ್ನಿಂದ ಹೊಸ ದೇಶೀಯ ಕ್ರಿಕೆಟ್ ಋತು ಆರಂಭವಾಗುತ್ತದೆ. ಹೀಗಾಗಿ ಐಪಿಎಲ್ ಅಕ್ಟೋಬರ್-ನವೆಂಬರ್ನಲ್ಲೇ ನಡೆದರೆ, ದೇಶೀಯ ಟೂರ್ನಿಗಳೂ ಮುಂದೂಡಲ್ಪಡುವ ಸಾಧ್ಯತೆ ಇದೆ.
ಐಪಿಎಲ್ ಬಗ್ಗೆ ಇನ್ನೂ ಗೊಂದಲ: ದೇಶದಲ್ಲಿ ಲಾಕ್ಡೌನ್ ಮುಂದುವರಿಯುವ ನಿರೀಕ್ಷೆ ಇರುವುದರಿಂದ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಯ ಬಗ್ಗೆ ಬಿಸಿಸಿಐ ಇನ್ನೂ ಗೊಂದಲದಲ್ಲೇ ಇದೆ. ಜುಲೈನಲ್ಲಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಬಿಸಿಸಿಐ ಚಿಂತಿಸಿದೆ ಎಂದು ಕೆಲ ವರದಿಗಳು ತಿಳಿಸಿವೆ. ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ನಡೆಯದಿದ್ದರೆ ಐಪಿಎಲ್ ಆಯೋಜಿಸಲಾಗುವುದು ಎಂದು ಕೆಲ ವರದಿಗಳು ಹೇಳುತ್ತಿವೆ. ಆದರೆ ಬಿಸಿಸಿಐ ಮಾತ್ರ ಎಲ್ಲವೂ ಸಹಜಸ್ಥಿತಿಗೆ ಬರುವವರೆಗೆ ಏನನ್ನೂ ಹೇಳಲಾಗದ ಸ್ಥಿತಿಯಲ್ಲಿದೆ.