

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮತ್ತು ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದಕ್ಕೆ ಮುನ್ನ ಮುಂಬೈನಲ್ಲಿ ನಡೆಸಲಾಗುವ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆದರೆ ಆ ಆಟಗಾರರನ್ನು ಭಾರತ ತಂಡದಿಂದ ಕೈಬಿಡಲಾಗುವುದು ಎಂದು ಬಿಸಿಸಿಐ ಎಚ್ಚರಿಸಿದೆ. ಪ್ರವಾಸಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಸಿಸಿಐ, ಟೀಮ್ ಇಂಡಿಯಾಗೆ ನೀಡಿದೆ.
ಮೇ 20ರಿಂದ 23ರ ನಡುವೆ ದೇಶದ ವಿವಿಧ ನಗರಗಳಿಂದ ಮುಂಬೈಗೆ ಆಗಮಿಸಲಿರುವ ಭಾರತ ತಂಡದ ಆಟಗಾರರು ಮತ್ತು ಅವರ ಕುಟುಂಬ ಸದಸ್ಯರು, 8 ದಿನಗಳ ಕಾಲ ಹೋಟೆಲ್ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಈ ಸಮಯದಲ್ಲಿ ಹಲವು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು. ಈ ವೇಳೆ ಕನಿಷ್ಠ 2 ನೆಗೆಟಿವ್ ವರದಿಗಳು ಇದ್ದರೆ ಮಾತ್ರ ಜೂನ್ 2ರಂದು ಇಂಗ್ಲೆಂಡ್‌ಗೆ ವಿಮಾನ ಏರಲು ಅವಕಾಶ ಲಭಿಸಲಿದೆ.
‘ಮುಂಬೈಗೆ ಆಗಮಿಸಿದ ಬಳಿಕ ನಡೆಸಲಾಗುವ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗುವ ಆಟಗಾರರು ಪ್ರವಾಸದಿಂದ ಹೊರಬಿದ್ದರು ಎಂದೇ ಪರಿಗಣಿಸಲಾಗುತ್ತದೆ. ಯಾಕೆಂದರೆ ಬಳಿಕ ಪ್ರತ್ಯೇಕ ಬಾಡಿಗೆ ವಿಮಾನದಲ್ಲಿ ಯಾವುದೇ ಆಟಗಾರರನ್ನು ಕರೆದೊಯ್ಯಲಾಗುವುದಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಪಿಎಲ್ 14ನೇ ಆವೃತ್ತಿಯ ವೇಳೆ ಬಯೋಬಬಲ್‌ನಲ್ಲೇ ಕರೊನಾ ಕಾಣಿಸಿಕೊಂಡ ಬಳಿಕ ಬಿಸಿಸಿಐ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ ಎನ್ನಲಾಗಿದೆ. ಮುಂಬೈಗೆ ಆಗಮಿಸಿದ ಬಳಿಕ ಆಟಗಾರರ ಎಲ್ಲ ಕುಟುಂಬ ಸದಸ್ಯರಿಗೂ ಪರೀಕ್ಷೆ ನಡೆಯಲಿದ್ದು, ಅವರು ಕೂಡ ಪಾಸಿಟಿವ್ ಆದರೆ ಪ್ರವಾಸಕ್ಕೆ ತಂಡದ ಜತೆಗೆ ತೆರಳಲು ಅನುಮತಿ ನಿರಾಕರಿಸಲಾಗುತ್ತದೆ.
ಭಾರತ ತಂಡದ ಕೆಲ ಆಟಗಾರರು ಈಗಾಗಲೆ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದು, ಇಂಗ್ಲೆಂಡ್ ಪ್ರವಾಸದ ವೇಳೆ ಅವರು 2ನೇ ಡೋಸ್ ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಮುಂಬೈಗೆ ತಲುಪುವ ವೇಳೆ ಸೋಂಕಿಗೆ ತುತ್ತಾಗುವ ಅಪಾಯವನ್ನು ತಪ್ಪಿಸುವ ಸಲುವಾಗಿ ಆಟಗಾರರಿಗೆ ವಿಮಾನ ಅಥವಾ ಕಾರಿನ ಮೂಲಕ ಆಗಮಿಸುವ ಆಯ್ಕೆಯನ್ನು ನೀಡಲಾಗಿದೆ.