ಕ್ರಿಕೆಟಿಗ ವಿಜಯ್ ಭಾರದ್ವಾಜ್ 2ನೇ ಹೆಂಡತಿ ಯಾರು ಗೊತ್ತೇ..?

vijay r bhardwaj
Published on

ಬೆಂಗಳೂರು: ಕ್ರಿಕೆಟಿಗರಿಗೂ ಬೈಕ್, ಕಾರುಗಳಿಗೂ ಅವಿನಾಭಾವ ಸಂಬಂಧ. ಕೆಲವೊಂದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ವಿಜೇತರಿಗೆ ಬೈಕ್ ಉಡುಗೊರೆಯಾಗಿ ನೀಡುವುದು ವಾಡಿಕೆ. ಸಹ ಆಟಗಾರರು ಪಂದ್ಯ ಶ್ರೇಷ್ಠ ರೂಪದಲ್ಲಿ ಪಡೆದ ಬೈಕ್ ಅನ್ನು ಭಾರತ ತಂಡದ ನಾಯಕರಾಗಿದ್ದ ಧೋನಿ ಮೈದಾನದ ಒಂದು ಸುತ್ತು ಓಡಿಸುತ್ತಿದ್ದರು. ಬೈಕ್, ಕಾರುಗಳಿಗಾಗಿ ಧೋನಿ ತಮ್ಮ ಮನೆಯಲ್ಲಿ ಪ್ರತ್ಯೇಕ ಗ್ಯಾರೇಜ್ ಇಟ್ಟುಕೊಂಡಿರುವುದು ಹಳೇ ವಿಷಯ. ಹಾಗೆಯೇ ಭಾರತ ತಂಡದ ಮಾಜಿ ಆಟಗಾರ ಕನ್ನಡಿಗ ವಿಜಯ್ ಭಾರದ್ವಾಜ್, ಟೂರ್ನಿಯೊಂದರಲ್ಲಿ ಸಿಕ್ಕ ಬೈಕ್ ಅನ್ನು ಎರಡನೇ ಹೆಂಡತಿ ಎಂದು ಕರೆದುಕೊಂಡಿದ್ದಾರೆ.

ಭಾರತ ತಂಡದ ಮಾಜಿ ಆಟಗಾರ ವಿಜಯ್ ಭಾರದ್ವಾಜ್ ಕ್ರಿಕೆಟಿಗನಾಗಿ, ವೀಕ್ಷಕ ವಿವರಣೆಗಾರನಾಗಿ ಸಾಕಷ್ಟು ಹೆಸರು ಮಾಡಿದವರು. ಉತ್ತಮ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ವಿಜಯ್ 11 ವರ್ಷಗಳ ಕಾಲ ರಾಜ್ಯ ತಂಡದ ಭಾಗವಾಗಿದ್ದರು. ವೃತ್ತಿ ಜೀವನದಲ್ಲಿ ಹಲವು ಟ್ರೋಫಿ, ಸ್ಮರಣಿಕೆಗಳು ದಕ್ಕಿವೆ. ಆದರೆ, ಈ ಬೈಕ್ ವಿಶೇಷವಾದದ್ದು. ಬ್ಯಾಂಕ್ ಟೂರ್ನಿಯೊಂದರಲ್ಲಿ ಸಿಕ್ಕ ಆರ್‌ಎಕ್ಸ್100 ಬೈಕ್ ನನ್ನ ಪಾಲಿಗೆ 2ನೇ ಹೆಂಡತಿ. 1989ನೇ ಮಾಡೆಲ್,...ಬ್ಯೂಟಿ...ಯಂಗ್‌ಸ್ಟಾರ್ಸ್‌ ಹಾರ್ಟ್ ಥ್ರೋಬ್.. ಎಂದು ಬೈಕ್ ಮೇಲೆ ಕುಳಿತಿರುವ ಚಿತ್ರದೊಂದಿಗೆ ಭಾರದ್ವಾಜ್ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ತಂಡದ ಪರ 1999 ರಿಂದ 2002ರವರೆಗೆ 3 ಟೆಸ್ಟ್ ಹಾಗೂ 10 ಏಕದಿನ ಪಂದ್ಯಗಳನ್ನಾಡಿದ್ದಾರೆ. 96 ಪ್ರಥಮ ದರ್ಜೆ, 72 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. ವೃತ್ತಿ ಜೀವನಕ್ಕೆ ನಿವೃತ್ತಿ ಹೇಳಿದ ಬಳಿಕ ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕನ್ನಡ ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net