ಕನ್ನಡದಲ್ಲಿ ಧನ್ಯವಾದ ಅರ್ಪಿಸಿದ ತಮಿಳುನಾಡು ಕ್ರಿಕೆಟಿಗ ಆರ್.ಅಶ್ವಿನ್..!

r ashwin for web
Published on

ಬೆಂಗಳೂರು: ಭಾರತ ಟೆಸ್ಟ್ ತಂಡದ ಆಟಗಾರ ಆರ್.ಅಶ್ವಿನ್ ಗುರುವಾರ 34ನೇ ವರ್ಷಕ್ಕೆ ಕಾಲಿಟ್ಟರು. ಸದ್ಯ ಐಪಿಎಲ್ ಸಿದ್ಧತೆಯಲ್ಲಿ ತೊಡಗಿರುವ ಅಶ್ವಿನ್ ಅವರಿಗೆ ಸಹ-ಆಟಗಾರರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರವೇ ಹರಿಸಿದರು. ಅಶ್ವಿನ್ ಹುಟ್ಟುಹಬ್ಬಕ್ಕೆ ವಿಶಿಷ್ಠವಾಗಿ ಹಾರೈಸುವ ಸಲುವಾಗಿ ಸ್ಟಾರ್ ಸ್ಪೋಟ್ಸ್ ಕನ್ನಡವಾಹಿನಿ, ಅಶ್ವಿನ್ ಅವರ ಯಾವ ಪ್ರದರ್ಶನ ನಿಮಿಗಿಷ್ಟ ಕಾಮೆಂಟ್ ಮಾಡಿ ಎಂದು ಅಭಿಮಾನಿಗಳಿಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿತ್ತು. ಇದಕ್ಕೆ ಹಲವು ಮಂದಿ ವಿವಿಧ ಸನ್ನಿವೇಶಗಳನ್ನು ಮೆಲುಕು ಹಾಕಿದ್ದಾರೆ. ಇದಕ್ಕೆ ಕನ್ನಡದಲ್ಲೇ ಪ್ರತಿಕ್ರಿಯಿಸಿರುವ ಅಶ್ವಿನ್, ‘ನನ್ನ ಜನ್ಮದಿನದಂದು ನೀವು ಪ್ರೀತಿ ಪೂರ್ವಕವಾಗಿ ಕಳುಹಿಸಿದ ಶುಭಾಶಯಕ್ಕೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಒಂದೇ ರಾಜ್ಯದ ಆಟಗಾರರು ಐಪಿಎಲ್ ಅಥವಾ ರಾಷ್ಟ್ರೀಯ ತಂಡದಲ್ಲಿ ಆಡುವಾಗ ತಮ್ಮ ಮಾತೃ ಭಾಷೆಗಳಲ್ಲಿ ಮಾತನಾಡುವುದು ವಾಡಿಕೆ. ಗುರುವಾರ ಹುಟ್ಟುಹಬ್ಬ ಆಚರಿಸಿಕೊಂಡ ಅಶ್ವಿನ್‌ಗೆ ಕನ್ನಡಿಗರು ಕೂಡ ಶುಭಾಶಯ ಸಲ್ಲಿಸಿದ್ದಾರೆ. ಇದಕ್ಕೆ ಸ್ಟಾರ್ ಸ್ಪೋಟ್ಸ್ ಕನ್ನಡ ವಾಹಿನಿ ಕೂಡ ವೇದಿಕೆ ಮಾಡಿಕೊಟ್ಟಿತ್ತು. ಇದಕ್ಕೆ ಅಶ್ವಿನ್ ಕನ್ನಡದಲ್ಲಿಯೇ ಪ್ರತಿಕ್ರಿಯಿಸಿ ಕನ್ನಡಿಗರ ಮನಗೆದ್ದಿದ್ದಾರೆ. ಅಶ್ವಿನ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್, ತಮಿಳಿನಲ್ಲಿ ‘ನಲ್ಲ ಇರಕ’ (ಚೆನ್ನಾಗಿದೆ) ಎಂದು ಪ್ರತಿಕ್ರಿಯೇ ನೀಡಿದ್ದಾರೆ.

ತಮಿಳುನಾಡಿನ ಅಶ್ವಿನ್, ಪ್ರಸಕ್ತ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ನಾಯಕನಾಗಿದ್ದರು. ಆರ್. ಅಶ್ವಿನ್ ರಾಷ್ಟ್ರೀಯ ತಂಡದ ಪರ ಇದುವರೆಗೂ 71 ಟೆಸ್ಟ್, 111 ಏಕದಿನ ಹಾಗೂ 46 ಟಿ20 ಪಂದ್ಯಗಳನ್ನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net