

ಮುಂಬೈ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಚಾಂಪಿಯನ್ ಪಟ್ಟವೇರಿದ ಸಂಭ್ರಮದೊಂದಿಗೆ ತವರಿಗೆ ಮರಳಿದ ಬೆನ್ನಲ್ಲೇ ಕ್ರಿಕೆಟಿಗ ಕೃನಾಲ್ ಪಾಂಡ್ಯ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಚಾರಣೆಗೆ ಒಳಪಟ್ಟಿದ್ದಾರೆ. ಬಹಿರಂಗಪಡಿಸದ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಆರೋಪದ ಮೇರೆಗೆ ಕಂದಾಯ ಗುಪ್ತಚರ ವಿಭಾಗದ ನಿರ್ದೇಶಕರು (ಡಿಆರ್‌ಐ), ಕೃನಾಲ್ ಪಾಂಡ್ಯ ಅವರನ್ನು ವಶಕ್ಕೆ ಪಡೆದರು.
ಗುರುವಾರ ಸಂಜೆ 5 ಗಂಟೆಗೆ ಕೃನಾಲ್ ಯುಎಇಯಿಂದ ಬಂದಿಳಿದರು. ಈ ವೇಳೆ ಡಿಆರ್‌ಐ ಅಧಿಕಾರಿಗಳು ಕೃನಾಲ್ ಪಾಂಡ್ಯ ಅವರನ್ನು ಪ್ರಶ್ನಿಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಬೆಲೆಬಾಳುವ ವಸ್ತುಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಕೃನಾಲ್ ಅವರನ್ನು ಅಧಿಕಾರಿಗಳು ಕೇಳಿದ್ದಾರೆ.
ಭಾರತ ಸರ್ಕಾರದ ನಿಯಮದನ್ವಯ ದುಬೈನಿಂದ ಮರಳುವ ಪುರುಷ ಪ್ರಯಾಣಿಗರು ಗರಿಷ್ಠ 20 ಗ್ರಾಂ ಅಂದರೆ 50 ಸಾವಿರ ರೂಪಾಯಿಯಷ್ಟು ಮೌಲ್ಯದ ಚಿನ್ನವನ್ನು ತೆರಿಗೆ ವಿನಾಯಿತಿಯೊಂದಿಗೆ ಹೊಂದಿರಲು ಅವಕಾಶವಿದೆ. ಮಹಿಳಾ ಪ್ರಯಾಣಿಗರು 40 ಗ್ರಾಂ ಅಂದರೆ 1 ಲಕ್ಷ ರೂ. ಮೌಲ್ಯದ ಚಿನ್ನವನ್ನು ಹೊಂದಿರಬಹುದಾಗಿದೆ. ಡಿಆರ್‌ಐ ಭಾರತದ ಗುಪ್ತಚರ ಘಟಕವಾಗಿದ್ದು, ಸ್ಮಗ್ಲಿಂಗ್ ನಿಗ್ರಹದ ಬಗ್ಗೆ ಗುಪ್ತಚರ ಕೆಲಸಗಳನ್ನು ನಿರ್ವಹಿಸುತ್ತದೆ.
ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಣ್ಣನಾಗಿರುವ ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಮಂಗಳವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರೇ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ರನ್ ಬಾರಿಸಿದ್ದರು.