

ಸಿಡ್ನಿ: ಸಹೋದ್ಯೊಗಿಯನ್ನೇ ನಕಲಿ ಭಯೋತ್ಪಾದಕನೆಂದು ಬಿಂಬಿಸಿದ ಆರೋಪದ ಮೇರೆಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಉಸ್ಮಾನ್ ಖವಾಜ ಅವರ ಹಿರಿಯ ಸಹೋದರನನ್ನು ಗುರುವಾರ ಜೈಲಿಗಟ್ಟಲಾಗಿದೆ. ಇದಕ್ಕೆ ಪ್ರಮುಖ ಕಾರಣ ತ್ರಿಕೋನ ಪ್ರೇಮ ಕಥೆ ಎಂಬುದು ಅಚ್ಚರಿಗೆ ಕಾರಣವಾಗಿದೆ. ತಮ್ಮ ಗೆಳತಿ ಜತೆಗೆ ಸಹೋದ್ಯೊಗಿ ಒಬ್ಬರಾದ ಕಮೆರ್ ನಿಜಾಮ್‌ದೀನ್ ತುಂಬಾ ಹತ್ತಿರವಾಗಿದ್ದರು. 2018ರಲ್ಲಿ ಅರ್ಸಾಲನ್ ತಾರಿಕ್ ಖವಾಜ, ನ್ಯೂ ಸೌತ್ ವೇಲ್ಸ್ ಸಹ-ಕೆಲಸಗಾರ ಕಮೆರ್ ಅವರ ನೋಟ್ ಬುಕ್‌ಗಳನ್ನು ನಕಲಿ ನಮೂದು ಮಾಡಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಅನಾವಶ್ಯಕವಾಗಿ ಭಯೋತ್ಪಾದಕ ಪಟ್ಟಿಕಟ್ಟಿಕೊಂಡ ನಿಜಾಮ್‌ದೀನ್ ಅವರನ್ನು 4 ವಾರಗಳ ಕಾಲ ಜೈಲಿಗೆ ಕಳುಹಿಸಲಾಗಿತ್ತು. 2017ರಲ್ಲಿ ಉಂಟಾದ ಪ್ರೇಮ ಕದನದಿಂದಾಗಿ ಖವಾಜ ಅವರ ಪ್ರೀತಿಗೆ ಅಡ್ಡಿಯಾಗಿದ್ದ ನಿಜಾಮ್‌ದೀನ್ ಅವರ ಮೇಲಿನ ಹೊಟ್ಟೆಕಿಚ್ಚಿನಿಂದ ಭಯೋತ್ಪಾದನೆ ಪಟ್ಟ ಕಟ್ಟಲಾಯಿತು. ನ್ಯೂ ಸೌತ್ ವೇಲ್ಸ್ ಜಿಲ್ಲಾ ಕೋರ್ಟ್‌ನ ನ್ಯಾಯಧೀಶ ರೊಬರ್ಟ್ ವೆಬೆರ್, 40 ವರ್ಷದ ಖವಾಜ್‌ಗೆ 4 ವರ್ಷ, 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಜತೆಗೆ ಎರಡೂವರೆ ವರ್ಷಗಳ ಕಾಲ ಪರೋಲ್ ರಹಿತ ಆದೇಶ ಹೊರಡಿಸಿದ್ದಾರೆ. ಖವಾಜ ಸುಮಾರು 22 ಪುಟಗಳ ನೋಟ್‌ಬುಕ್ ತಯಾರಿಸಿ, ವಿಶ್ವವಿದ್ಯಾಲಯ ಸಿಬ್ಬಂದಿಗೆ ನೀಡಿದ್ದರು. ಇದರಲ್ಲಿ ಪ್ರಧಾನ ಮಂತ್ರಿ ಮಾಲ್ಕನ್ ಟರ್ನ್ ಬುಲ್ ಹಾಗೂ ಗವರ್ನರ್ ಜನರಲ್‌ಗೆ ಸೇರಿದಂತೆ ಕೆಲ ಗಣ್ಯವ್ಯಕ್ತಿಗಳನ್ನು ಕೊಲ್ಲುವ ಬೆದರಿಕೆ ಹಾಕಲಾಗಿತ್ತು.
ನಿಜಾಮ್‌ದೀನ್ ಅನುಭವಿಸಿರುವ ಯಾತನೆ ಕುರಿತು ನ್ಯಾಯಧೀಶರು ಮರುಕ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ನೊಂದಿರುವ ನಿಜಾಮ್‌ದೀನ್ ಶ್ರೀಲಂಕಾಗೆ ವಾಪಸಾಗಿದ್ದಾರೆ. ಇದರಿಂದ ವೀಸಾ ರದ್ದುಗೊಂಡಿರುವುದರಿಂದ ತಮ್ಮ ನಿಶ್ಚಿತ ವಧು ನೋಡುವ ಸಲುವಾಗಿ ಅಮೆರಿಕಾಗೂ ಹೋಗದಂತೆ ಆಗಿದೆ. ಖವಾಜ ಸಹೋದರ ಉಸ್ಮಾನ್ ಖವಾಜ ಆಸ್ಟ್ರೇಲಿಯಾದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದು, 44 ಟೆಸ್ಟ್ ಹಾಗೂ 40 ಏಕದಿನ ಪಂದ್ಯಗಳನ್ನಾಡಿದ್ದಾರೆ. ಘಟನೆ ಬೆಳಕೆಗೆ ಬರುವವರೆಗೂ ನನ್ನ ಸಹೋದರ ಸಮಾಜದ ಉತ್ತಮ ನಾಗರೀಕನಂತೆ ಇದ್ದರು ಎಂದು ಉಸ್ಮಾನ್ ಖವಾಜ್ ತಿಳಿಸಿದ್ದಾರೆ.