ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್​ ಆಸ್ಪತ್ರೆಗೆ ದಾಖಲು! ಏನಾಯ್ತು ಸ್ಟಾರ್​ ಬ್ಯಾಟರ್​ಗೆ? Yashasvi Jaiswal

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಆಸ್ಪತ್ರೆಗೆ ದಾಖಲು
  • ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯದ ಬೆನ್ನಲ್ಲೇ ಹದಗೆಟ್ಟ ಆರೋಗ್ಯ
  • ಪುಣೆಯ ಆದಿತ್ಯ ಬಿರ್ಲಾ ಆಸ್ಪತ್ರೆಗೆ ಯಶಸ್ವಿ ಜೈಸ್ವಾಲ್​ ಸ್ಥಳಾಂತರ
ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ( Yashasvi Jaiswal ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ 2025ರ ಭಾಗವಾಗಿ ಮಂಗಳವಾರ (ಡಿ.16) ರಾಜಸ್ಥಾನ ಮತ್ತು ಮುಂಬೈ ನಡುವಿನ ಪಂದ್ಯ ನಡೆಯಿತು. ಈ ವೇಳೆ ಅನಾರೋಗ್ಯಕ್ಕೆ ಒಳಗಾದ ಬೆನ್ನಲ್ಲೇ ಜೈಸ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಿಳಿದುಬಂದಿರುವ ಮಾಹಿತಿ ಪ್ರಕಾರ, ಜೈಸ್ವಾಲ್​ ಅವರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.
ಜೈಸ್ವಾಲ್​ ಅವರನ್ನು ಪುಣೆಯ ಆದಿತ್ಯ ಬಿರ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಜೈಸ್ವಾಲ್​ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಪಂದ್ಯದ ಉದ್ದಕ್ಕೂ ಜೈಸ್ವಾಲ್​ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ಹಲವಾರು ವರದಿಗಳು ತಿಳಿಸಿವೆ. ಪಂದ್ಯದ ನಂತರ ಅವರ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 216 ರನ್ ಗಳಿಸಿತು. ರಾಜಸ್ಥಾನ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಮುಕುಲ್ ಚೌಧರಿ (54 ರನ್​, 28 ಎಸೆತ, 4 ಬೌಂಡರಿ, 3 ಸಿಕ್ಸರ್‌) ಮತ್ತು ದೀಪಕ್ ಹೂಡಾ (51 ರನ್​, 31 ಎಸೆತ, 4 ಬೌಂಡರಿ, 3 ಸಿಕ್ಸರ್‌) ಅರ್ಧಶತಕಗಳನ್ನು ಗಳಿಸಿದರು. ರಾಮ್‌ನಿವಾಸ್ ಗೋಲ್ಡಾ (48 ರನ್​, 29 ಎಸೆತ, 3 ಬೌಂಡರಿ ಮತ್ತು 3 ಸಿಕ್ಸರ್‌) ಅತ್ಯುತ್ತಮ ಪ್ರದರ್ಶನ ನೀಡಿದರು.
ನಂತರ ಮುಂಬೈ ತಂಡವು 18.1 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 217 ರನ್‌ಗಳ ಗುರಿಯನ್ನು ತಲುಪಿತು. ಅಜಿಂಕ್ಯ ರಹಾನೆ (72 ರನ್​, 41 ಎಸೆತ 7 ಬೌಂಡರಿ, 3 ಸಿಕ್ಸರ್‌) ಮತ್ತು ಸರ್ಫರಾಜ್ ಖಾನ್ (73 ರನ್​, 22 ಎಸೆತ 6 ಬೌಂಡರಿ, 7 ಸಿಕ್ಸರ್‌) ಮುಂಬೈ ಪರ ಅದ್ಭುತ ಅರ್ಧಶತಕಗಳನ್ನು ಗಳಿಸಿದರು. ಜೈಸ್ವಾಲ್ ಅನಾರೋಗ್ಯದ ನಡುವೆಯೂ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದು, 16 ಎಸೆತಗಳಲ್ಲಿ 15 ರನ್ ಗಳಿಸಿದರು.
ಭಾರತೀಯ ಕ್ರಿಕೆಟ್‌ನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಜೈಸ್ವಾಲ್​ ತುಂಬಾ ಬಳಲಿದ್ದಾರೆ. ಇದೀಗ ಜೈಸ್ವಾಲ್ ಅವರು ಆಸ್ಪತ್ರೆಗೆ ದಾಖಲಾಗಿರುವುದು ಕಳವಳವನ್ನು ಹೆಚ್ಚಿಸಿದೆ. ಏಕೆಂದರೆ, ಭಾರತಕ್ಕಾಗಿ ಎಲ್ಲಾ ಮಾದರಿಗಳ ಕ್ರಿಕೆಟ್‌ಗೆ ಜೈಸ್ವಾಲ್​ ಅವರ ಪ್ರಾಮುಖ್ಯತೆ ತುಂಬಾ ಹೆಚ್ಚುತ್ತಿದೆ. ಹೀಗಾಗಿ ಜೈಸ್ವಾಲ್​ ಅವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net