ಇಂದು ಡಬ್ಲ್ಯುಪಿಎಲ್ ಆಟಗಾರ್ತಿಯರ ಮೆಗಾ ಹರಾಜು: ಕರ್ನಾಟಕದ 10 ಕ್ರಿಕೆಟಿಗರು, ಆರ್‌ಟಿಎಂಗೆ ಅವಕಾಶ

ಡಬ್ಲ್ಯುಪಿಎಲ್ ಆಟಗಾರ್ತಿಯರ ಮೆಗಾ ಹರಾಜು
ಡಬ್ಲ್ಯುಪಿಎಲ್ ಆಟಗಾರ್ತಿಯರ ಮೆಗಾ ಹರಾಜು
Published on

ಪ್ರಮುಖ ಮುಖ್ಯಾಂಶಗಳು

  • ಏಕದಿನ ವಿಶ್ವಕಪ್ ವಿಜೇತರಿಗೆ ಬೇಡಿಕೆ ನಿರೀಕ್ಷೆ
  • 73 ಸ್ಥಾನಗಳಿಗೆ 277 ಕ್ರಿಕೆಟಿಗರ ನಡುವೆ ಪೈಪೋಟಿ
  • ಡಬ್ಲ್ಯುಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಮೆಗಾ ಹರಾಜು
  • ಆರ್‌ಟಿಎಂಗೆ ಅವಕಾಶ
ನವದೆಹಲಿ:ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಾಲ್ಕನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರ್ತಿಯರ ಮೆಗಾ ಹರಾಜು ಪ್ರಕ್ರಿಯೆ ಏರೋಸಿಟಿಯ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆಯಲಿದೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯೆರಾದ ದೀಪ್ತಿ ಶರ್ಮ, ಕ್ರಾಂತಿ ಗೌಡ್, ಶ್ರೀಚರಣಿ ಸೇರಿ ವಿದೇಶಿ ತಾರೆಗಳ ಸೇರ್ಪಡೆಗೆ ಐದು ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಮುಂದಿನ ವರ್ಷ ಜನವರಿಯಲ್ಲಿ 4ನೇ ಆವೃತ್ತಿಯ ಟೂರ್ನಿ ನಡೆಯಲಿದೆ.
ಡಬ್ಲ್ಯುಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಮೆಗಾ ಹರಾಜು ನಡೆಯಲಿದ್ದು,194 ಭಾರತೀಯರು ಸೇರಿ ಒಟ್ಟು 277 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಐದು ಫ್ರಾಂಚೈಸಿಗಳು 50 ಭಾರತೀಯರು, 23 ವಿದೇಶಿ ಸೇರಿ ಗರಿಷ್ಠ 73 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. ರಿಟೇನ್- ಹರಾಜು ಖರೀದಿ ಸೇರಿ ಕನಿಷ್ಠ 15ರಿಂದ ಗರಿಷ್ಠ 18 ಆಟಗಾರ್ತಿಯರನ್ನು (6 ವಿದೇಶಿ ಸೇರಿ) ಹೊಂದಬಹುದಾಗಿದೆ. ಎಲ್ಲ ಫ್ರಾಂಚೈಸಿಗಳಿಗೆ ತಲಾ 15 ಕೋಟಿ ರೂ. ಬಜೆಟ್ ನಿಗದಿಪಡಿಸಲಾಗಿದೆ.
ಆರ್‌ಟಿಎಂಗೆ ಅವಕಾಶ
ಡಬ್ಲ್ಯುಪಿಎಲ್ ಹರಾಜಿನಲ್ಲಿ ತಂಡಗಳಿಗೆ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಬಳಕೆಗೆ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ರಿಟೇನ್ ಪ್ರಕ್ರಿಯೆಯಲ್ಲಿ ಗರಿಷ್ಠ ಐದು ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಅಥವಾ ಮರಳಿ ಖರೀದಿಸಲು ಅವಕಾಶ ನೀಡಲಾಗಿತ್ತು. ಇದರನ್ವಯ ಒಬ್ಬರನ್ನು ಮಾತ್ರ ರಿಟೇನ್ ಮಾಡಿರುವ ಯುಪಿ ವಾರಿಯರ್ಸ್‌ ತಂಡ 4 ಆರ್‌ಟಿಎಂ ಕಾರ್ಡ್ ಬಳಸುವ ಅವಕಾಶ ಹೊಂದಿದೆ. ಗುಜರಾತ್ ಜೈಂಟ್ಸ್ ಇಬ್ಬರು ವಿದೇಶಿ ಆಟಗಾರ್ತಿಯರನ್ನು ರಿಟೇನ್ ಮಾಡಿಕೊಂಡಿದ್ದು, ಉಳಿದಿರುವ 3 ಆರ್‌ಟಿಎಂ ಕಾರ್ಡ್‌ಗಳನ್ನು ಭಾರತೀಯ ಆಟಗಾರ್ತಿಯರ ಮರು ಸೇರ್ಪಡೆಗೆ ಬಳಸಬಹುದಾಗಿದೆ.
ಆರ್‌ಸಿಬಿ ತಂಡ ಏಕೈಕ ಆರ್‌ಟಿಎಂ ಕಾರ್ಡ್ ಹೊಂದಿದ್ದು, ಅನ್ ಕ್ಯಾಪ್ಡ್ ಭಾರತೀಯ ಆಟಗಾರ್ತಿಯರನ್ನು ಮರಳಿ ಖರೀದಿಸುವ ಅವಕಾಶವಿದೆ. ಗರಿಷ್ಠ ಐವರು ಆಟಗಾರ್ತಿಯರನ್ನು ರಿಟೇನ್ ಮಾಡಿಕೊಂಡಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ಆರ್‌ಟಿಎಂ ಕಾರ್ಡ್ ಆಯ್ಕೆ ಲಭ್ಯವಿಲ್ಲ.
ಯುಪಿ ಬಳಿ ಗರಿಷ್ಠ ಮೊತ್ತ
ಫ್ರಾಂಚೈಸಿ ಬಳಿಯ ಒಟ್ಟು ₹15 ಕೋಟಿ ಬಜೆಟ್‌ನಲ್ಲಿ, ₹14.50 ಕೋಟಿ ಉಳಿಸಿಕೊಂಡಿರುವ ಯುಪಿ ವಾರಿಯರ್ಸ್‌ ಅತ್ಯಧಿಕ ಮೊತ್ತದೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದೆ. ಗುಜರಾತ್ ಜೈಂಟ್ಸ್ (₹ 9 ಕೋಟಿ), ಆರ್‌ಸಿಬಿ (₹6.15 ಕೋಟಿ), ಮುಂಬೈ (₹5.75 ಕೋಟಿ), ಡೆಲ್ಲಿ ಕ್ಯಾಪಿಟಲ್ಸ್ (₹5.70 ಕೋಟಿ) ನಂತರದಲ್ಲಿವೆ. ಮುಂಬೈ, ಡೆಲ್ಲಿ ತಂಡಗಳು ಕನಿಷ್ಠ 10 ಆಟಗಾರ್ತಿಯರನ್ನು ಖರೀದಿಸಬೇಕಾಗುತ್ತದೆ.
ಕರ್ನಾಟಕದ 10 ಆಟಗಾರ್ತಿಯರು
ಈ ಬಾರಿ ಹರಾಜಿಗೆ ಕರ್ನಾಟಕ 10 ಆಟಗಾರ್ತಿಯರ ಹೆಸರು ಅಂತಿಮಗೊಂಡಿದ್ದು, ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಗರಿಷ್ಠ 40 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಶುಭಾ ಸತೀಶ್, ಮೋನಿಕಾ ಪಟೇಲ್ (ತಲಾ 30 ಲಕ್ಷ ರೂ.), ವೃಂದಾ ದಿನೇಶ್, ಪ್ರತ್ಯುಷಾ ಕುಮಾರ್, ಸಹನಾ ಪವಾರ್, ಪ್ರಿಯಾ ಚವನ್, ಬಿ.ಜಿ. ತೇಜಸ್ವಿನಿ, ಮಿಥಿಲಾ ವಿನೋದ್, ಕಾಶ್ವಿ ಕಂಡಿಕುಪ್ಪ (ತಲಾ 10 ಲಕ್ಷ ರೂ.) ಮೂಲಬೆಲೆ ಹೊಂದಿದ್ದಾರೆ. ಶ್ರೇಯಾಂಕಾ ಪಾಟೀಲ್ (ಆರ್‌ಸಿಬಿ) ಮತ್ತು ನಿಕಿ ಪ್ರಸಾದ್ (ಡೆಲ್ಲಿ) ರಿಟೇನ್ ಆಗಿದ್ದಾರೆ.
ದೀಪ್ತಿ, ವೋಲ್ವಾರ್ಡ್‌ಗೆ ಬೇಡಿಕೆ
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿ ವಿಜೇತೆ ದೀಪ್ತಿ ಶರ್ಮ (₹50 ಲಕ್ಷ ಮೂಲಬೆಲೆ) ಖರೀದಿಗೆ ಬೇಡಿಕೆಯ ನಿರೀಕ್ಷೆಯಿದೆ. ಗರಿಷ್ಠ ರನ್ ಸ್ಕೋರರ್ ದ.ಆಫ್ರಿಕಾದ ನಾಯಕಿ ಲೌರಾ ವೋಲ್ವಾರ್ಡ್, ನ್ಯೂಜಿಲೆಂಡ್‌ನ ಸೋಫಿ ಡಿವೈನ್, ಆಸೀಸ್‌ನ ಮಾಜಿ ನಾಯಕಿ ಮೆಗ್ ಲ್ಯಾನಿಂಗ್, ಪೋಬಿ ಲಿಚ್ಛ್‌ಫೀಲ್ಡ್, ಹರ್ಲೀನ್ ಡಿಯೋಲ್, ಸ್ನೇಹಾ ರಾಣಾ, ರೇಣುಕಾ ಸಿಂಗ್, ಅಲನ್ ಕಿಂಗ್, ಸೋಫಿ ಎಕೆಲ್‌ಸ್ಟೋನ್, ಜಾರ್ಜಿಯಾ ವೋಲ್, ಅಲಿಸ್ಸಾ ಹೀಲಿ ಹರಾಜಿನ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಹರಾಜಿನಲ್ಲಿ 19 ಆಟಗಾರ್ತಿಯರು 50 ಲಕ್ಷ ರೂ. ಮೂಲಬೆಲೆ ಹೊಂದಿದ್ದು, 11 ಆಟಗಾರ್ತಿಯರು ₹40 ಲಕ್ಷ, 88 ಮಂದಿ 30 ಲಕ್ಷ ರೂ. ಮೂಲಬೆಲೆ ಪಡೆದುಕೊಂಡಿದ್ದಾರೆ.
ಹರಾಜು ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net