ನಾಳೆಯಿಂದ ವಡೋದರದಲ್ಲಿ ಡಬ್ಲ್ಯುಪಿಎಲ್​ ಕಾದಾಟ; ಗೆಲುವಿನ ಓಟ ಮುಂದುವರಿಸಲು ಆರ್​ಸಿಬಿ ಸಜ್ಜು

ನಾಳೆಯಿಂದ ವಡೋದರದಲ್ಲಿ ಡಬ್ಲ್ಯುಪಿಎಲ್​ ಕಾದಾಟ; ಗೆಲುವಿನ ಓಟ ಮುಂದುವರಿಸಲು ಆರ್​ಸಿಬಿ ಸಜ್ಜು
ನಾಳೆಯಿಂದ ವಡೋದರದಲ್ಲಿ ಡಬ್ಲ್ಯುಪಿಎಲ್​ ಕಾದಾಟ; ಗೆಲುವಿನ ಓಟ ಮುಂದುವರಿಸಲು ಆರ್​ಸಿಬಿ ಸಜ್ಜು
Published on
ವಡೋದರ: ವುಮೆನ್ಸ್​ ಪ್ರೀಮಿಯರ್​ ಲೀಗ್​ (WPL​) ನಾಲ್ಕನೇ ಆವೃತ್ತಿಯ ಎರಡನೇ ಹಾಗೂ ಅಂತಿಮ ಚರಣಕ್ಕೆ ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ. ಸತತ ನಾಲ್ಕು ಗೆಲುವಿನೊಂದಿಗೆ ನವಿ ಮುಂಬೈನ ಮೊದಲ ಚರಣವನ್ನು ಅಜೇಯವಾಗಿ ಮುಕ್ತಾಯಗೊಳಿಸಿರುವ ಮಾಜಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದೀಗ ವಡೋದರದಲ್ಲೂ ಗೆಲುವಿನ ಆರಂಭ ಕಾಣುವ ತವಕದಲ್ಲಿದೆ. ಸ್ಮೃತಿ ಮಂದನಾ ಬಳಗ ಸೋಮವಾರ ನಡೆಯಲಿರುವ ವಡೋದರ ಚರಣದ ಮೊದಲ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ತಂಡವನ್ನು ಎದುರಿಸಲಿದೆ. ಆರ್​ಸಿಬಿ ತಂಡದ ಪ್ಲೇಆ್​ ಪ್ರವೇಶ ಈಗಾಗಲೆ ಬಹುತೇಕ ಪಕ್ಕಾ ಆಗಿದ್ದು, ಉಳಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ ನೇರವಾಗಿ ಫೈನಲ್​ಗೇರುವ ಅವಕಾಶವೂ ಇದೆ.

ಆರ್​ಸಿಬಿ ಬ್ಯಾಟಿಂಗ್​ ವಿಭಾಗಕ್ಕೆ ಈಗಾಗಲೆ ಗ್ರೇಸ್​ ಹ್ಯಾರಿಸ್​, ರಿಚಾ ಘೋಷ್​, ನಾಡಿನ್​ ಡಿ ಕ್ಲರ್ಕ್​, ರಾಧಾ ಯಾದವ್​ ಬಲ ತುಂಬಿದ್ದರೆ, ಕಳೆದ ಪಂದ್ಯದಲ್ಲಿ ಮಿಂಚಿದ ಸ್ಮೃತಿ ಮಂದನಾ ಮತ್ತು ಜಾರ್ಜಿಯಾ ವೊಲ್​ ಮತ್ತಷ್ಟು ವಿಶ್ವಾಸ ಮೂಡಿಸಿದ್ದಾರೆ. ಬೌಲಿಂಗ್​ನಲ್ಲಿ ಲಾರೆನ್​ ಬೆಲ್​, ನಾಡಿನ್​, ಶ್ರೇಯಾಂಕಾ ಪಾಟೀಲ್​ ಜತೆಗೆ ಸಯಾಲಿ ಸತ್ಗರೆ ಕೂಡ ಕಳೆದ ಪಂದ್ಯದಲ್ಲಿ ಶಕ್ತಿ ಹೆಚ್ಚಿಸಿದ್ದಾರೆ. ಟೂರ್ನಿಯಲ್ಲಿ ಗುಜರಾತ್​ ವಿರುದ್ಧದ ಮೊದಲ ಮುಖಾಮುಖಿಯಲ್ಲಿ 32 ರನ್​ಗಳಿಂದ ಗೆದ್ದ ಆತ್ಮವಿಶ್ವಾಸವೂ ಆರ್​ಸಿಬಿ ತಂಡಕ್ಕಿದೆ. ಆರ್​ಸಿಬಿಯ ಹಳೆ ಆಟಗಾರ್ತಿಯರಾದ ಸೋಫಿ ಡಿವೈನ್​, ರೇಣುಕಾ ಸಿಂಗ್​, ಜಾರ್ಜಿಯಾ ವರೆಹ್ಯಾಂ ಈ ಬಾರಿ ಸವಾಲೊಡ್ಡುವ ನಿರೀಕ್ಷೆ ಇದೆ.

ಪ್ಲೇಆಫ್​​ ಲೆಕ್ಕಾಚಾರ: ಟೂರ್ನಿಯ 11 ಪಂದ್ಯ ಮುಗಿದಿದ್ದು, ಇನ್ನು 9 ಲೀಗ್​ ಪಂದ್ಯಗಳು ಬಾಕಿ ಇವೆ. ಯಾವ ತಂಡವೂ ಇದುವರೆಗೆ ಪ್ಲೇಆಫ್​ ಪ್ರವೇಶ ಖಾತ್ರಿಪಡಿಸಿಕೊಂಡಿಲ್ಲ. ಆರ್​ಸಿಬಿ ಇನ್ನೊಂದು ಪಂದ್ಯ ಗೆದ್ದರೂ ಪ್ಲೇಆಫ್​​ಗೇರಬಹುದಾಗಿದೆ. ಆಗ ಉಳಿದ 2 ಸ್ಥಾನಗಳಿಗೆ ಇತರ 4 ತಂಡಗಳು ಪೈಪೋಟಿ ನಡೆಸಬೇಕಾಗುತ್ತದೆ. ಅದರಲ್ಲೂ ಡೆಲ್ಲಿ ತಂಡ ಪ್ಲೇಆಫ್​ಗೇರಬೇಕಾದರೆ ಉಳಿದ 4 ಪಂದ್ಯಗಳಲ್ಲೂ ಗೆಲ್ಲಲೇಬೇಕಾಗಿದೆ. ಸತತ 2 ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದ ಗುಜರಾತ್​ ಈಗ ಸತತ 2 ಸೋಲಿನೊಂದಿಗೆ ಲಯ ತಪ್ಪಿದೆ. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ಕೊನೇ 2 ಪಂದ್ಯಗಳಲ್ಲಿ ಗೆದ್ದಿರುವ ಯುಪಿ ವಾರಿಯರ್ಸ್​ಗೂ ಉಳಿದ 3 ಲೀಗ್​ ಪಂದ್ಯಗಳಲ್ಲೂ ಗೆಲ್ಲುವ ಒತ್ತಡವಿದೆ.
ಸೋಮವಾರದ ಪಂದ್ಯ
ಆರ್​ಸಿಬಿ-ಗುಜರಾತ್​
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net