ಆರ್​ಸಿಬಿ ಕಿಟ್​ ಬ್ಯಾಗ್ ಹಿಡಿದು ಬಂದ ಅನಯಾ: WPLನಲ್ಲಿ ಆಡುವ ತೃತೀಯ ಲಿಂಗಿಯ ಕನಸು ನನಸಾಗುವುದೇ? Anaya Bangar

ಅನಯಾ ಬಂಗಾರ್
ಅನಯಾ ಬಂಗಾರ್
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರನ ಬಗ್ಗೆ ನಿಮಗೆ ತಿಳಿದಿದೆ ಅಲ್ಲವೇ?
  • ಆರ್ಯನ್ ಅವರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಗೊತ್ತಿದೆ
  • ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಪಡೆದು ಹುಡುಗಿಯಾಗಿ ಬದಲಾಗಿದ್ದಾರೆ
  • ತಮ್ಮ ಹೆಸರನ್ನು ಅನಯಾ ಬಂಗಾರ್ ಎಂದು ಬದಲಾಯಿಸಿಕೊಂಡಿದ್ದಾರೆ
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಅವರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ಪಡೆದ ನಂತರ ಅವರು ಹುಡುಗಿಯಾಗಿ ಬದಲಾಗಿದ್ದಾರೆ. ಹೀಗಾಗಿ ತಮ್ಮ ಹೆಸರನ್ನು ಅನಯಾ ಬಂಗಾರ್ ( Anaya Bangar ) ಎಂದು ಬದಲಾಯಿಸಿಕೊಂಡಿದ್ದಾರೆ.
ಆರ್ಯನ್​ನಿಂದ ಅನಯಾ ಆಗಿ ಬದಲಾದ ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ದೇಹ ಬದಲಾವಣೆ ಅಥವಾ ರೂಪಾಂತರದ ಬಗ್ಗೆ ಸಾಕಷ್ಟು ವಿವರಗಳನ್ನು ಹಂಚಿಕೊಂಡರು. ಈ ಮಧ್ಯೆ ಅವರು ರಿಯಾಲಿಟಿ ಶೋ ಒಂದರಲ್ಲಿಯೂ ಭಾಗವಹಿಸಿದ್ದರು.
ತಾಜಾ ಸಂಗತಿ ಏನೆಂದರೆ, ಇತ್ತೀಚೆಗೆ, ಅನಯಾ ಅವರು ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ವೈರಲ್​ ಆಗುತ್ತಿದ್ದಂತೆ ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಅನಯಾ ಭಾಗವಹಿಸುವಿಕೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಶುರುವಾಗಿವೆ.
ಅನಯಾ ಬಂಗಾರ್ ಅವರ ತಂದೆ ಸಂಜಯ್ ಬಂಗಾರ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕೋಚ್ ಆಗಿದ್ದರು. ಆದ್ದರಿಂದ ಅನಯಾ ಕೂಡ ಅದೇ ತಂಡಕ್ಕೆ ಆಡುವ ನಿರೀಕ್ಷೆಯಿದೆ. ಏಕೆಂದರೆ, ಇತ್ತೀಚೆಗೆ ಬಿಡುಗಡೆಯಾದ ವಿಡಿಯೋದಲ್ಲಿ, ಆರ್​ಸಿಬಿ ಕ್ರಿಕೆಟ್ ಕಿಟ್ ಬ್ಯಾಗ್‌ನೊಂದಿಗೆ ಮೈದಾನಕ್ಕೆ ಬಂದು ಅಭ್ಯಾಸ ಮಾಡುತ್ತಿರುವ ದೃಶ್ಯವಿದೆ.
ವಿಡಿಯೋದಲ್ಲಿ ಅನಯಾ ಅವರು ಮೊದಲು ರನ್ನಿಂಗ್​ ಮಾಡುತ್ತಾರೆ. ಆ ಬಳಿಕ ತಮ್ಮ ಪ್ಯಾಡ್‌ಗಳನ್ನು ಹಾಕಿಕೊಂಡು ಬ್ಯಾಟ್ ಕೈಗೆತ್ತಿಕೊಳ್ಳುತ್ತಾರೆ. ಅಲ್ಲದೆ, ಬ್ಯಾಟ್​ ಮೂಲಕ ತಮ್ಮ ಬ್ಯಾಟಿಂಗ್​ ಶೈಲಿಯನ್ನೂ ಪ್ರದರ್ಶಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅನಯಾ ಅವರು ಆರ್​ಸಿಬಿ ಮಹಿಳಾ ತಂಡವನ್ನು ಸೇರಬಹುದು ಎಂಬ ಊಹಾಪೋಹಕ್ಕೆ ಈ ವಿಡಿಯೋ ಕಾರಣವಾಗಿದೆ. ಆದಾಗ್ಯೂ, ಐಸಿಸಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಿಂದ ಟ್ರಾನ್ಸ್‌ಜೆಂಡರ್ ಆಟಗಾರ್ತಿಯರನ್ನು ನಿಷೇಧಿಸಿರುವುದರಿಂದ, ಅನಯಾ ಅವರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅವಕಾಶ ನೀಡಲಾಗುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಅಂದಹಾಗೆ, ಅನಯಾ ಅವರು ರೈಸ್ ಅಂಡ್ ಫಾಲ್ ರಿಯಾಲಿಟಿ ಶೋನಲ್ಲಿ ಈ ಹಿಂದೆ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು ನಾನು ನನ್ನ ಹಕ್ಕುಗಳಿಗಾಗಿ ಹೋರಾಡುತ್ತೇನೆ. ಒಂದು ದಿನ ನಾನು ಭಾರತಕ್ಕಾಗಿ ವಿಶ್ವಕಪ್ ಗೆಲ್ಲುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದರು. ಇತ್ತೀಚೆಗೆ, ಭಾರತೀಯ ಮಹಿಳಾ ತಂಡ 2025ರ ಏಕದಿನ ವಿಶ್ವಕಪ್ ಗೆದ್ದಾಗ, ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಮಹಿಳಾ ತಂಡವನ್ನು ಅಭಿನಂದಿಸಿದರು.
ಅನಯಾ ಅವರ ಇತ್ತೀಚಿನ ಪೋಸ್ಟ್‌ಗಳು ಹೆಚ್ಚಾಗಿ ವೃತ್ತಿಪರ ಕ್ರಿಕೆಟ್‌ಗೆ ಪ್ರವೇಶಿಸಲು ಅವರು ಶ್ರಮಿಸುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ. ಆದರೆ, ಕ್ರಿಕೆಟ್​ ನಿಯಮಗಳು ಅದಕ್ಕೆ ವಿರುದ್ಧವಾಗಿವೆ. ಕ್ರಿಕೆಟ್ ಆಡುವ ಅವರ ಕನಸು ನನಸಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಅಂದಹಾಗೆ, ಸಂಜಯ್ ಬಂಗಾರ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರಲ್ಲಿ ಆರ್ಯನ್ ಹಿರಿಯ ಮಗನಾಗಿದ್ದರು. ಇದೀಗ ಲಿಂಗ ಬದಲಾವಣೆ ಮಾಡಿಕೊಂಡಿದ್ದಾರೆ. ಸಂಜಯ್ ಬಂಗಾರ್​ ಅವರು ಭಾರತಕ್ಕಾಗಿ 12 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net