45 ಲಕ್ಷ ರೂ.ಗೆ ಗುಜರಾತ್​ ತಂಡ ಸೇರಿದ ಅನುಷ್ಕಾ ಶರ್ಮಾ: ವಿರಾಟ್​ ಕೊಹ್ಲಿ ಶಾಕ್​! WPL 2026 Auction

ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ
ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ಅದ್ಧೂರಿಯಾಗಿ ನಡೆದ ಮಹಿಳಾ ಪ್ರೀಮಿಯರ್ ಲೀಗ್​ - 2026ರ ಮೆಗಾ ಹರಾಜು
  • ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಮೆಗಾ ಈವೆಂಟ್‌
  • ಮೆಗಾ ಹರಾಜಿನಲ್ಲಿ ಮುನ್ನೆಲೆಗೆ ಬಂದ ಅನುಷ್ಕಾ ಶರ್ಮಾ ಹೆಸರು
  • 45 ಲಕ್ಷ ರೂ.ಗಳೊಂದಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾದ ಅನುಷ್ಕಾ
ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್​ - 2026ರ ಮೆಗಾ ಹರಾಜು ( WPL 2026 Auction) ಗುರುವಾರ (ನ.27) ಅದ್ಧೂರಿಯಾಗಿ ನಡೆಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಈ ಮೆಗಾ ಈವೆಂಟ್‌ನಲ್ಲಿ ಒಟ್ಟು 277 ಕ್ರಿಕೆಟಿಗರು ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. ಆದರೆ, ಈ ಈವೆಂಟ್​ನಲ್ಲಿ ಕೇವಲ 73 ಸ್ಥಾನಗಳಿಗೆ ಮಾತ್ರ ಅವಕಾಶವಿತ್ತು. ಕೆಲವು ಆಟಗಾರರು ಭಾರಿ ಮೊತ್ತಕ್ಕೆ ಬಿಕರಿಯಾದರೆ, ಇತರರು ಕಡಿಮೆ ಮೊತ್ತಕ್ಕೆ ಮಾರಾಟವಾದರು. ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸಾ ಹೀಲಿ ಮಾರಾಟವಾಗದೇ ಉಳಿದರು.
ಅಚ್ಚರಿಯ ಸಂಗತಿ ಏನೆಂದರೆ, ಈ ಮೆಗಾ ಹರಾಜಿನಲ್ಲಿ ಅನುಷ್ಕಾ ಶರ್ಮಾ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿತು. ಏಕೆಂದರೆ, ಅನುಷ್ಕಾ ಹೆಸರಿನಲ್ಲಿ ಬಿಡ್ಡಿಂಗ್ ಕೂಡ ಮಾಡಲಾಯಿತು. ಅನುಷ್ಕಾ ಶರ್ಮಾ ಹೆಸರು ಕೇಳಿದಾಗ ಥಟ್ಟನೆ ನೆನಪಿಗೆ ಬರುವ ಇನ್ನೊಂದು ಹೆಸರೆಂದರೆ ಅದು ವಿರಾಟ್​ ಕೊಹ್ಲಿ. ಅನುಷ್ಕಾ ಮತ್ತು ವಿರಾಟ್​ ತಾರಾ ದಂಪತಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅನುಷ್ಕಾ ಶರ್ಮಾ ಖ್ಯಾತ ಬಾಲಿವುಡ್​ ನಟಿ ಅನ್ನೋದು ಕೂಡ ತಿಳಿದಿದೆ.
ಯಾವಾಗ ಮೆಗಾ ಹರಾಜಿನಲ್ಲಿ ಅನುಷ್ಕಾ ಶರ್ಮಾ ಹೆಸರು ಕೇಳಿಬಂತೋ ಎಲ್ಲರು ಹುಬ್ಬೇರಿಸಿದ್ದಾರೆ. ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಕೂಡ ಹರಾಜಿನಲ್ಲಿ ಭಾಗವಹಿಸಿದ್ರಾ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಅಸಲಿ ಸಂಗತಿ ಏನೆಂದರೆ, ಹರಾಜಿನಲ್ಲಿ ಕೇಳಿಬಂದ ಅನುಷ್ಕಾ ಶರ್ಮಾ ಕೊಹ್ಲಿಯ ಪತ್ನಿಯಲ್ಲ. ಆಕೆ ಮಧ್ಯಪ್ರದೇಶದ ಮಹಿಳಾ ಆಟಗಾರ್ತಿ. ಆಕೆಯ ಹೆಸರು ಕೂಡ ಅನುಷ್ಕಾ ಶರ್ಮಾ ಆಗಿರುವುದರಿಂದ ಗೊಂದಲಕ್ಕೆ ಕಾರಣವಾಯಿತು.
ಅಂದಹಾಗೆ, ಹರಾಜಿನಲ್ಲಿ ಭಾಗವಹಿಸಿದ ಹುಡುಗಿಯ ಪೂರ್ಣ ಹೆಸರು ಅನುಷ್ಕಾ ಬ್ರೀಜ್ ಮೋಹನ್ ಶರ್ಮಾ ಎಂದು. ಅದನ್ನು ತುಂಬಾ ಚಿಕ್ಕದಾಗಿ ಅನುಷ್ಕಾ ಶರ್ಮಾ ಎಂದು ಬದಲಾಯಿಸಿಕೊಂಡಿದ್ದಾರೆ. ನಿನ್ನೆ ಹತ್ತು ಲಕ್ಷ ರೂಪಾಯಿಗಳೊಂದಿಗೆ ಹರಾಜಿಗೆ ಪ್ರವೇಶಿಸಿದ ಅನುಷ್ಕಾ ಶರ್ಮಾ, ಬರೋಬ್ಬರಿ 45 ಲಕ್ಷ ರೂ.ಗಳೊಂದಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾದರು.
22 ವರ್ಷದ ಅನುಷ್ಕಾ ಶರ್ಮಾ ಮಧ್ಯಪ್ರದೇಶ ರಾಜ್ಯದಲ್ಲಿ ಹುಟ್ಟಿ ಬೆಳೆದರು. ಅವರೊಬ್ಬ ಉತ್ತಮ ಆಲ್‌ರೌಂಡರ್ ಆಟಗಾರ್ತಿ. ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ಅವರು ಮಧ್ಯಪ್ರದೇಶ ಮಹಿಳಾ ತಂಡ ಮತ್ತು ಕೇಂದ್ರ ವಲಯ ತಂಡಗಳಿಗೆ ಆಡಿದ್ದಾರೆ. ಅವರನ್ನು ಪ್ರತಿ ಬಾರಿಯೂ ಅನ್‌ಕ್ಯಾಪ್ಡ್ ಆಟಗಾರ್ತಿಯಾಗಿ ತಂಡಗಳು ಬಳಸುತ್ತಿವೆ. ನಿನ್ನೆ ಮೆಗಾ ಹರಾಜಿನಲ್ಲಿ ಅವರ ಹೆಸರು ಬಂದಾಗ, ಎಲ್ಲರೂ ವಿರಾಟ್ ಕೊಹ್ಲಿ ಅವರ ಪತ್ನಿ ಎಂದು ಭಾವಿಸಿದ್ದರು. ಆದರೆ, ಆಕೆಯ ಫೋಟೋ ನೋಡಿದಾಗ ಸುಮ್ಮನಾದರು. ಆದರೆ, ನೆಟ್ಟಿಗರು ಮಾತ್ರ ಸುಮ್ಮನಾಗಿಲ್ಲ. ಏಕೆಂದರೆ, ಅನುಷ್ಕಾ ಶರ್ಮಾ ಹೆಸರು ಕೇಳಿ ಕೊಹ್ಲಿ ಶಾಕ್​ ಆಗಿದ್ದಾರೆ ಎಂದು ತೋರಿಸುವ ಮೀಮ್​​ಗಳನ್ನು ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net