ವಿಶ್ವದ ಪ್ರಮುಖ ಚದುರಂಗ ತಾರೆಯರು ಭಾಗವಹಿಸಿರುವ ಗ್ಲೋಬಲ್ ಚೆಸ್ ಲೀಗ್ (ಜಿಸಿಎಲ್) ನಾಲ್ಕನೇ ಆವೃತ್ತಿಯ ಅಂಕಪಟ್ಟಿಯ ಅಗ್ರಸ್ಥಾನಕ್ಕೆ ನಿಕಟ ಪೈಪೋಟಿ ಏರ್ಪಟ್ಟಿದೆ. ಸತತ 3 ಸೋಲುಗಳಿಂದ ಪುಟಿದೆದ್ದ ಅಮೆರಿಕನ್ ಗ್ಯಾಂಬಿಟ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಮರಳಿದರೆ, ಅಲ್ಪೈನ್ ಎಪಿಎಲ್ ಪೈಪರ್ಸ್ ಎರಡನೇ ಸ್ಥಾನಕ್ಕೆ ಕುಸಿತ ಕಂಡಿತು. ದಿಗ್ಗಜ ವಿಶ್ವನಾಥನ್ ಆನಂದ್ ಸಾರಥ್ಯದ ಅಲಸ್ಕನ್ ನೈಟ್ಸ್ ತಂಡ ದಿನದ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡಿತು. ಆರು ತಂಡಗಳು ಭಾಗವಹಿಸಿರುವ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಅಂಕಪಟ್ಟಿಯ ಅಗ್ರ 2 ತಂಡಗಳು ಸೆ.13ರಂದು ಪ್ರಶಸ್ತಿಗಾಗಿ ಸೆಣಸಲಿವೆ. ಮಹೀಂದ್ರಾ ಮತ್ತು ಫಿಡೆ ಜಂಟಿಯಾಗಿ ಆಯೋಜಿಸಿರುವ ಜಿಸಿಎಲ್ 4ನೇ ಆವೃತ್ತಿ ತನ್ನ ಅರ್ಧ ಹಾದಿ ಕ್ರಮಿಸಿದೆ.