ವಿಶ್ವಕಪ್ ಗೆದ್ದ ನಾಯಕನಿಗೆ ಬಿಗ್​​ ಶಾಕ್: ಟಿ20 ನಾಯಕತ್ವದಿಂದ ಸೂರ್ಯಕುಮಾರ್​ ಔಟ್​​! | SuryakumarYadav

SuryakumarYadav
SuryakumarYadav
Published on
ಬೆಂಗಳೂರು: ಭಾರತಕ್ಕೆ ಟಿ20 ವಿಶ್ವಕಪ್ 2026 ಟ್ರೋಫಿ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ (SuryakumarYadav)ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗಂಭೀರ ಚಿಂತನೆ ನಡೆಸಿದೆ ಎಂದು ಬುಧವಾರ ವರದಿಯಾಗಿದೆ. 
ಹೌದು, ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿ ಕೇವಲ ಮೂರು ತಿಂಗಳು ಕಳೆಯುವಷ್ಟರಲ್ಲೇ ಈ ದಿಢೀರ್ ಬೆಳವಣಿಗೆ ನಡೆದಿದ್ದು, ಅವರನ್ನು ನಾಯಕತ್ವದಿಂದ ಕೈಬಿಡುವುದು ಬಹುತೇಕ ಖಚಿತ ಎಂದು ಮೂಲಗಳು ವರದಿ ಮಾಡಿವೆ.

ಭವಿಷ್ಯದ ತಂಡದತ್ತ ಬಿಸಿಸಿಐ ಚಿತ್ತ

ಚಾಲ್ತಿಯಲ್ಲಿರುವ ಜೂನ್ ತಿಂಗಳ ಕೊನೆಯಲ್ಲಿ ಭಾರತ ತಂಡವು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಗಳಿಗೆ ತಂಡವನ್ನು ಪ್ರಕಟಿಸುವ ಕೆಲವೇ ದಿನಗಳ ಮುನ್ನ ಈ ಸ್ಫೋಟಕ ಸುದ್ದಿ ಹೊರಬಿದ್ದಿದೆ. ಸದ್ಯ ಬಿಸಿಸಿಐ ಆಯ್ಕೆ ಸಮಿತಿಯು 2028 ರ ಟಿ20 ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಟಿ20 ನಾಯಕನ ಹುಡುಕಾಟದಲ್ಲಿದೆ. ಯುವ ಆಟಗಾರರನ್ನು ಒಳಗೊಂಡ ಬಲಿಷ್ಠ ಭವಿಷ್ಯದ ತಂಡವನ್ನು ನಿರ್ಮಿಸುವ ನಿಟ್ಟಿನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಮಂಡಳಿ ಬಂದಿದೆ ಎನ್ನಲಾಗಿದೆ. ಕೇವಲ ನಾಯಕತ್ವ ಮಾತ್ರವಲ್ಲದೆ, ಟಿ20 ತಂಡದಲ್ಲಿ ಅವರ ಸ್ಥಾನದ ಕುರಿತೂ ಮುಂಬರುವ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ.

ಕೈಕೊಟ್ಟ ಇತ್ತೀಚಿನ ಫಾರ್ಮ್!

ಸೂರ್ಯಕುಮಾರ್ ಯಾದವ್ ಅವರ ಇತ್ತೀಚಿನ ಕಳಪೆ ಬ್ಯಾಟಿಂಗ್ ಫಾರ್ಮ್ ಕೂಡ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಒಟ್ಟಾರೆಯಾಗಿ ಭಾರತದ ಪರ 113 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 36.35 ರ ಸರಾಸರಿ ಹಾಗೂ 162.94 ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 3272 ರನ್ ಗಳಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ರನ್ ಗಳಿಕೆಯ ಗ್ರಾಫ್ ಗಣನೀಯವಾಗಿ ಕುಸಿದಿದೆ. ಜನವರಿ 1, 2025 ರಿಂದ ಮಾರ್ಚ್ 2026 ರ ನಡುವಿನ ಅವಧಿಯಲ್ಲಿ ಅವರು ಆಡಿದ 35 ಪಂದ್ಯಗಳಿಂದ ಕೇವಲ 702 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅದಕ್ಕೂ ಮುನ್ನ, ಜನವರಿ 1, 2024 ರಿಂದ ಡಿಸೆಂಬರ್ 31, 2024 ರವರೆಗೆ ಆಡಿದ 18 ಟಿ20 ಪಂದ್ಯಗಳಲ್ಲಿ 26.81 ರ ಸಾಧಾರಣ ಸರಾಸರಿಯಲ್ಲಿ ಕೇವಲ 429 ರನ್ ಗಳಿಸಿದ್ದರು.
ಈ ಅಂಕಿ-ಅಂಶಗಳು ಸೂರ್ಯಕುಮಾರ್ ಅವರ ಟಿ20 ಸಾಮ್ರಾಜ್ಯದ ಮೇಲಿನ ಹಿಡಿತ ಸಡಿಲವಾಗುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ. ವಿಶ್ವಕಪ್ ಗೆದ್ದುಕೊಟ್ಟ ನಾಯಕನನ್ನೇ ದಿಢೀರನೆ ಹುದ್ದೆಯಿಂದ ತೆಗೆದುಹಾಕಲು ಬಿಸಿಸಿಐ ಮುಂದಾಗಿರುವುದು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net