World Cup ಹೀರೊ ಶಿವಂ ದುಬೆ ರೈಲಿನಲ್ಲಿ ಯಾಕೆ ಮುಖ ಮುಚ್ಚಿಕೊಂಡಿದ್ದರು? ಅಹಮದಾಬಾದ್-ಮುಂಬೈ ಪ್ರಯಾಣದ ಇಂಟರೆಸ್ಟಿಂಗ್ ಸ್ಟೋರಿ!

Shivam Dube
Shivam Dube
Published on
ಮುಂಬೈ: ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು ಭಾರತಕ್ಕೆ ವಿಶ್ವಕಪ್(World Cup) ತಂದುಕೊಟ್ಟ ಆಟಗಾರ, ಕೋಟ್ಯಂತರ ರೂಪಾಯಿ ಬೆಲೆಯ ಐಷಾರಾಮಿ ಫ್ಲಾಟ್‌ಗಳ ಒಡೆಯ. ಆದರೆ, ಗೆಲುವಿನ ಸಂಭ್ರಮದ ಬೆನ್ನಲ್ಲೇ ಅಹಮದಾಬಾದ್‌ನಿಂದ ಮುಂಬೈಗೆ ಮರಳಲು ಈ ಸ್ಟಾರ್ ಕ್ರಿಕೆಟಿಗ ಆರಿಸಿಕೊಂಡಿದ್ದು ರೈಲಿನ ಎಸಿ 3-ಟೈರ್ ಕೋಚ್!
ಹೌದು, ಅಭಿಮಾನಿಗಳಿಗೆ ಗುರುತು ಸಿಗದಂತೆ ರೈಲ್ವೆಯ ದಪ್ಪ ಕಂಬಳಿಯೊಳಗೆ ಅಡಗಿ ಕುಳಿತು ಪ್ರಯಾಣಿಸಿದ ಶಿವಂ ದುಬೆ ಅವರ ಈ ರೋಚಕ ಕಥೆ ಈಗ ಭಾರಿ ವೈರಲ್ ಆಗಿದೆ.
ಮಾರ್ಚ್ 8 ರಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶಿವಂ ದುಬೆ ಅಬ್ಬರಿಸಿದ್ದರು. ಕೇವಲ 8 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 26 ರನ್ ಚಚ್ಚಿದ ದುಬೆ, ಭಾರತದ ಮೊತ್ತವನ್ನು ದಾಖಲೆಯ 255ಕ್ಕೆ ತಲುಪಿಸಲು ನೆರವಾಗಿದ್ದರು. ಭಾರತ ಐತಿಹಾಸಿಕ ಜಯ ಸಾಧಿಸಿ ವಿಶ್ವಕಪ್ ಮುಡಿಗೇರಿಸಿಕೊಂಡ ಕೆಲವು ಗಂಟೆಗಳ ನಂತರ ಈ ಘಟನೆ ನಡೆದಿದೆ.

ಫ್ಲೈಟ್ ಟಿಕೆಟ್ ಸಿಗದೆ ರೈಲಿನಲ್ಲಿ ಪ್ರಯಾಣ

ಮಾರ್ಚ್ 9 ರ ಮುಂಜಾನೆ ಶಿವಂ ದುಬೆ, ಅವರ ಪತ್ನಿ ಅಂಜುಮ್ ಖಾನ್ ಮತ್ತು ಒಬ್ಬ ಗೆಳೆಯ ಅಹಮದಾಬಾದ್‌ನಿಂದ ಮುಂಬೈಗೆ ಮರಳಲು ವಿಮಾನದ ಟಿಕೆಟ್ ಪಡೆಯಲು ಪ್ರಯತ್ನಿಸಿದರು. ಆದರೆ, ವಿಶ್ವಕಪ್ ಗೆಲುವಿನ ಅಲೆಯಿದ್ದ ಕಾರಣ ಯಾವುದೇ ವಿಮಾನದ ಟಿಕೆಟ್ ಲಭ್ಯವಿರಲಿಲ್ಲ. ಅನಿವಾರ್ಯವಾಗಿ ಅವರು ಅಹಮದಾಬಾದ್-ಮುಂಬೈ ಸಯಾಜಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದರು.
ಅಭಿಮಾನಿಗಳು ಗುರುತಿಸಿದರೆ ಸಂಭ್ರಮಾಚರಣೆಯ ನೆಪದಲ್ಲಿ ಸುತ್ತುವರಿಯುವ ಭೀತಿಯಿಂದಾಗಿ, ಇಡೀ ಪ್ರಯಾಣದ ಉದ್ದಕ್ಕೂ ಶಿವಂ ದುಬೆ ಎಸಿ ಕೋಚ್‌ನ ದಪ್ಪ ಕಂಬಳಿಯನ್ನು ಮುಸುಕು ಹಾಕಿಕೊಂಡು ಮಲಗಿದ್ದರು. ಮುಂಜಾನೆ ಬೊರಿವಲಿ ನಿಲ್ದಾಣದಲ್ಲಿ ಇಳಿದ ಅವರು ಅಲ್ಲಿಂದ ತಮ್ಮ ಮನೆಗೆ ತಲುಪಿದರು.

27 ಕೋಟಿ ರೂಪಾಯಿಯ ಐಷಾರಾಮಿ ಫ್ಲಾಟ್‌!

ರೈಲಿನಲ್ಲಿ ಸಾಮಾನ್ಯರಂತೆ ಪ್ರಯಾಣಿಸಿದರೂ, ಶಿವಂ ದುಬೆ ಮುಂಬೈನಲ್ಲಿ ಅತಿ ದೊಡ್ಡ ಆಸ್ತಿಯ ಒಡೆಯರಾಗಿದ್ದಾರೆ. ಕಳೆದ ವರ್ಷವಷ್ಟೇ (ಜೂನ್ 2025) ಅವರು ಮುಂಬೈನ ಅಂಧೇರಿ ವೆಸ್ಟ್‌ನ ಓಶಿವಾರಾದಲ್ಲಿ 27.50 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್​ ಖರೀದಿಸಿದ್ದಾರೆ.
ಡಿಎಲ್‌ಹೆಚ್ ಎನ್‌ಕ್ಲೇವ್ (DLH Enclave), 17 ಮತ್ತು 18ನೇ ಮಹಡಿ. ಅಪಾರ್ಟ್‌ಮೆಂಟ್ 4,200 ಚದರ ಅಡಿ ಮತ್ತು ಬಾಲ್ಕನಿ 3,800 ಚದರ ಅಡಿ ಸೇರಿದಂತೆ ಒಟ್ಟು 9,603 ಚದರ ಅಡಿ. ಈ ಕಟ್ಟಡದಿಂದ ಮುಂಬೈನ ಸುಂದರವಾದ ಮ್ಯಾಂಗ್ರೋವ್ಸ್ ಮತ್ತು ಕ್ರೀಕ್ (Creek) ವೀಕ್ಷಣೆ ಲಭ್ಯವಿದೆ. ಅಲ್ಲದೆ, ಈ ಖರೀದಿಗಾಗಿ ದುಬೆ 1.65 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ.
ಸೆಲೆಬ್ರಿಟಿಗಳ ನೆರೆಹೊರೆ!
ಶಿವಂ ದುಬೆ ಅವರ ಹೊಸ ಮನೆಯಿರುವ ಇದೇ ಡಿಎಲ್‌ಹೆಚ್ ಎನ್‌ಕ್ಲೇವ್ ಕಟ್ಟಡದಲ್ಲಿ ಜನಪ್ರಿಯ ಹಾಸ್ಯನಟ ಕಪಿಲ್ ಶರ್ಮಾ, ಗಾಯಕ ಮಿಕಾ ಸಿಂಗ್ ಮತ್ತು ದಿವಂಗತ ನಟ ಇರ್ಫಾನ್ ಖಾನ್ ಅವರಂತಹ ಘಟಾನುಘಟಿಗಳು ವಾಸಿಸುತ್ತಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಮತ್ತು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಶಿವಂ ದುಬೆ, 2024 ಮತ್ತು 2026ರ ವಿಶ್ವಕಪ್ ವಿಜೇತ ತಂಡಗಳ ಸದಸ್ಯರಾಗುವ ಮೂಲಕ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಮೈದಾನದಲ್ಲಿ ಕೋಟಿ ಕೋಟಿ ಸಂಪಾದಿಸಿದರೂ, ಅವರಲ್ಲಿರುವ ಈ ಸರಳತೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net