2011 ವಿಶ್ವಕಪ್​ ಸಚಿನ್​ಗಾಗಿ! 2027ರ ಟ್ರೋಫಿ ಇವರಿಗಾಗಿ... ಟೀಮ್​ ಇಂಡಿಯಾಗೆ ಐಪಿಎಲ್ ಚೇರ್ಮನ್ ಅರುಣ್​ ಮನವಿ

2011ರ ವಿಶ್ವಕಪ್​ ಗೆದ್ದ ಸಮಯದ ಫೋಟೋ
2011ರ ವಿಶ್ವಕಪ್​ ಗೆದ್ದ ಸಮಯದ ಫೋಟೋ
Published on

ಪ್ರಮುಖ ಮುಖ್ಯಾಂಶಗಳು

  • 2011ರ ವಿಶ್ವಕಪ್​ ಸಚಿನ್​ ತೆಂಡೂಲ್ಕರ್​ಗೆ ಅರ್ಪಣೆ
  • ಅಂದು ಸಚಿನ್​ಗೆ 2027ರ ವಿಶ್ವಕಪ್​ ವಿರಾಟ್​ಗೆ
  • 'ರನ್​ಮಷಿನ್'​ಗಾಗಿ ಗೆಲ್ಲಬೇಕು ಎಂದ ಐಪಿಎಲ್​ ಅಧ್ಯಕ್ಷ
ನವದೆಹಲಿ: 2027ರ ಏಕದಿನ ವಿಶ್ವಕಪ್​ಗೆ ಕ್ರಿಕೆಟ್​ ಪ್ರಿಯರು ಹಾಗೂ ಮಾಜಿ ಕ್ರಿಕೆಟಿಗರ ಕಣ್ಣು ಬಿದ್ದಿದ್ದು, ದಿಗ್ಗಜ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಅವರನ್ನು ಕೊನೆಯ ಬಾರಿಗೆ ಮೈದಾನದಲ್ಲಿ ಕಣ್ತುಂಬಿಕೊಳ್ಳಲು ತೀರ ಕಾತರ, ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಒಂದಷ್ಟು ಸುದ್ದಿಗಳು 'ರೋಕೊ' ಜೋಡಿ ಆಡುವುದು ಬಹುತೇಕ ಅನುಮಾನ. ಅವರಿಬ್ಬರು ಶೀಘ್ರವೇ ಏಕದಿನ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಲಿದ್ದಾರೆ ಎನ್ನುತ್ತಿವೆ. ಇದೆಲ್ಲದರ ನಡುವೆಯೂ ಇತ್ತೀಚಿನ ಸರಣಿಗಳಲ್ಲಿ ಕೊಹ್ಲಿ ಮತ್ತು ರೋಹಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ, ವದಂತಿ ಹಬ್ಬಿಸುವವರ ಬಾಯಿಯನ್ನು ಮುಚ್ಚಿಸುತ್ತಿವೆ.
ಪ್ರಸ್ತುತ, ಟಿ20 ಮತ್ತು ಟೆಸ್ಟ್​ಗೆ ಗುಡ್​ಬೈ ಹೇಳಿರುವ 'ರೋಕೊ', ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಫಾರ್ಮೆಟ್​ನಲ್ಲಿಯೇ ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಬ್ಯಾಟರ್​ಗಳನ್ನು 2027ರ ವಿಶ್ವಕಪ್​ ಟೂರ್ನಿಯಲ್ಲಿ ನೋಡುವ ಹೆಬ್ಬಯಕೆ ಹೊಂದಿರುವವರ ಪೈಕಿ ಐಪಿಎಲ್​ ಮುಖ್ಯಸ್ಥ ಅರುಣ್ ಧುಮಾಲ್​​ ಕೂಡ ಒಬ್ಬರು ಎನ್ನುವುದಕ್ಕೆ ಅವರಾಡಿರುವ ಈ ಮಾತುಗಳೇ ಸಾಕ್ಷಿ.
"ಕಳೆದ ದಶಕಗಳಲ್ಲಿ ವಿರಾಟ್​ ಕೊಹ್ಲಿ ಎಲ್ಲ ಫಾರ್ಮೆಟ್​ಗಳಲ್ಲಿಯೂ ಅದ್ಭುತವಾಗಿದ್ದಾರೆ. ಅದರಲ್ಲಿ ಅನುಮಾನವೇ ಬೇಡ. 2011ರಲ್ಲಿ ಟೀಮ್ ಇಂಡಿಯಾ ಸಚಿನ್​ ತೆಂಡೂಲ್ಕರ್​ ಅವರಿಗೆ ವಿಶ್ವಕಪ್​ ಗೆದ್ದು ಅರ್ಪಿಸಿತು. ಅಂತೆಯೇ, 2027ರ ಏಕದಿನ ವಿಶ್ವಕಪ್​ ಅನ್ನು ಈಗಿರುವ ಭಾರತ ತಂಡ ವಿರಾಟ್​ಗಾಗಿ ಗೆದ್ದು ಕೊಡಬೇಕು. ಅದೇ ರೀತಿಯಲ್ಲಿ ಗೆಲ್ಲಿಸಬೇಕು. ಕೊಹ್ಲಿ, ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಕ್ರಿಕೆಟ್​ ಜಗತ್ತಿಗೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ" ಎಂದು ಅರುಣ್​ ಹೇಳಿದ್ದಾರೆ.
"ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ 28 ವರ್ಷಗಳ ಬಳಿಕ ವಿಶ್ವಕಪ್​ ಗೆದ್ದಿತು. ಅದು ಸಚಿನ್​ ಅವರ ಆರನೇ ಹಾಗೂ ಕೊನೆಯ ಐಸಿಸಿ ಟೂರ್ನಿ ಆಗಿತ್ತು. ಕೊಹ್ಲಿ ಮತ್ತು ತಂಡದ ಇತರೆ ಸದಸ್ಯರು ಮಾಸ್ಟರ್​ಬ್ಲಾಸ್ಟರ್​ ಅನ್ನು ತಮ್ಮ ಹೆಗಲ ಮೇಲೆ ಹೊತ್ತು, ಮೈದಾನದಲ್ಲಿ ಮೆರವಣಿಗೆ ಮಾಡಿದರು. ಈಗ ಇದು ವಿರಾಟ್​ಗೆ ಸಲ್ಲಬೇಕು. ಇಷ್ಟು ವರ್ಷಗಳ ಕಾಲ ಟೀಮ್ ಇಂಡಿಯಾವನ್ನು ಹೊತ್ತಿರುವ ವಿರಾಟ್​ರನ್ನು ನಾವು ಹೊತ್ತು ಸಾಗುವ ಸಮಯ" ಎಂದಿದ್ದಾರೆ.
"ಇದು ರೋಹಿತ್ ಶರ್ಮಗೂ ಅನ್ವಯ. ಟೆಸ್ಟ್​ ಕ್ರಿಕೆಟ್​ನಲ್ಲಿ ಅವರ ಕೊಡುಗೆ ಕೂಡ ಅದ್ಭುತವಾಗಿದೆ. ಟೀಮ್ ಇಂಡಿಯಾದ ನಾಯಕನಾಗಿ ಜವಾಬ್ದಾರಿ ಹೊತ್ತ ಮೇಲಂತು, ರೋಹಿತ್ ರಾಕ್​ಸ್ಟಾರ್​ ಆಗಿ ಮಿಂಚಿದ್ದಾರೆ. ಇವರಿಬ್ಬರಿಗೆ ಎಲ್ಲಿಯವರೆಗೆ ತಂಡದಲ್ಲಿ ಆಡಲು ಮನಸ್ಸಿದೆಯೋ, ಅಲ್ಲಿಯವರೆಗೆ ಅವರ ಭವಿಷ್ಯ ಕುರಿತು ಯಾರೊಬ್ಬರು ಪ್ರಶ್ನಿಸಬಾರದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net