Wimbledon: ಜೋಕೋ-ಸಿನ್ನರ್ ಮುಖಾಮುಖಿಗೆ ವೇದಿಕೆ ಸಜ್ಜು; ಉಪಾಂತ್ಯಕ್ಕ ಕೊಸ್ಟಯುಕ್, ನೋಸ್ಕೋವಾ

ಜೋಕೋ-ಸಿನ್ನರ್ ಮುಖಾಮುಖಿಗೆ ವೇದಿಕೆ ಸಜ್ಜು; ಉಪಾಂತ್ಯಕ್ಕ ಕೊಸ್ಟಯುಕ್, ನೋಸ್ಕೋವಾ
ಜೋಕೋ-ಸಿನ್ನರ್ ಮುಖಾಮುಖಿಗೆ ವೇದಿಕೆ ಸಜ್ಜು; ಉಪಾಂತ್ಯಕ್ಕ ಕೊಸ್ಟಯುಕ್, ನೋಸ್ಕೋವಾ
Published on
ಲಂಡನ್: ಸೆರ್ಬಿಯಾ ತಾರೆ ಹಾಗೂ ಏಳು ಬಾರಿಯ ಚಾಂಪಿಯನ್ ಪ್ರತಿಷ್ಠಿತ ವಿಂಬಲ್ಡನ್
(Wimbledon) ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ 15ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದರು. ಮಂಗಳವಾರ ತಡರಾತ್ರಿ ನಡೆದ 5 ಗಂಟೆ 15 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಮೂರನೇ ಶ್ರೇಯಾಂಕಿತ ಫೆಲಿಕ್ಸ್ ಆಗರ್ ಅಲಿಯಾಸ್ಸಿಮ್‌ರನ್ನು ಮಣಿಸಿದ 39 ವರ್ಷದ ಜೋಕೊವಿಕ್ ಈ ಸಾಧನೆ ಮಾಡಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ, ಯೂಕ್ರೇನ್‌ನ ಮಾರ್ಟಾ ಕೊಸ್ಟಯುಕ್, ಜೆಕ್ ಗಣರಾಜ್ಯದ ಲಿಂಡಾ ನೋಸ್ಕೋವಾ ನಾಲ್ಕರ ಘಟ್ಟಕ್ಕೇರಿದರು.
ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ 24 ಗ್ರಾಂಡ್ ಸ್ಲಾಂ ವಿಜೇತ, 7ನೇ ಶ್ರೇಯಾಂಕಿತ ಜೋಕೋ 7-6, 3-6, 6-3, 6-7, 7-6ರಿಂದ ಐದು ಸೆಟ್‌ಗಳ ಕಠಿಣ ಹೋರಾಟದಲ್ಲಿ ಕೆನಡಾದ 25 ವರ್ಷದ ಫೆಲಿಕ್ಸ್ ಆಗರ್ ಅಲಿಯಾಸ್ಸಿಮ್ ಎದುರು ಗೆಲುವು ಒಲಿಸಿಕೊಂಡರು. ಇದು ವಿಂಬಲ್ಡನ್ ಇತಿಹಾಸದಲ್ಲಿ ಸುದೀರ್ಘ ಕ್ವಾರ್ಟರ್‌ ಫೈನಲ್‌ ಪಂದ್ಯವಾಗಿದೆ.
ಸತತ ಎಂಟನೇ ಬಾರಿಗೆ ಅಂತಿಮ ನಾಲ್ಕರ ಘಟ್ಟಕ್ಕೇರಿರುವ ಜೋಕೊ ಶುಕ್ರವಾರ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಯಾನಿಕ್ ಸಿನ್ನರ್ ಸವಾಲು ಎದುರಿಸಲಿದ್ದಾರೆ. ಹಾಲಿ ವರ್ಷ ಎರಡನೇ ಗ್ರಾಂಡ್ ಸ್ಲಾಂನಲ್ಲಿ ಇವರಿಬ್ಬರು ಎದುರಾಗಲಿದ್ದು, ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಿನ್ನರ್ ಎದುರು ಜೋಕೋ ಜಯ ಸಾಧಿಸಿದ್ದರು. ಆದರೆ, ಕಳೆದ ವರ್ಷವೂ ವಿಂಬಲ್ಡನ್ ಸೆಮೀಸ್‌ನಲ್ಲಿ ಎದುರಾದಾಗ ಸಿನ್ನರ್, ನೇರಸೆಟ್‌ಗಳಲ್ಲಿ ಜೋಕೊವಿಕ್‌ರನ್ನು ಮಣಿಸಿದ್ದರು.
120. ಜೋಕೊವಿಕ್ ವಿಂಬಲ್ಡನ್ ಸಿಂಗಲ್ಸ್‌ನಲ್ಲಿ ಸರ್ವಾಧಿಕ ಪಂದ್ಯವ್ನನಾಡಿದ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ (119) ದಾಖಲೆ ಮುರಿದರು.
ಉಪಾಂತ್ಯಕ್ಕೇರಿದ ಕೊಸ್ಟಯುಕ್, ನೋಸ್ಕೋವಾ
12ನೇ ಶ್ರೇಯಾಂಕಿತೆ ಕೊಸ್ಟಯುಕ್ ಮಹಿಳಾ ಸಿಂಗಲ್ಸ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ನಲ್ಲಿ 6-3, 6-2 ನೇರಸೆಟ್‌ಗಳಿಂದ ಇಟಲಿಯ ಜಾಸ್ಮಿನ್ ಪಾವೊಲಿನಿ ವಿರುದ್ಧ ಗೆಲುವು ಸಾಧಿಸಿದರು. ಇದರೊಂದಿಗೆ ಫ್ರೆಂಚ್ ಓಪನ್ ನಂತರ ವಿಂಬಲ್ಡನ್‌ನಲ್ಲಿಯೂ 4ರ ಘಟ್ಟಕ್ಕೇರಿ, ಈ ಸಾಧನೆ ಮಾಡಿದ ಯೂಕ್ರೇನ್‌ನ 2ನೇ ಆಟಗಾರ್ತಿ ಎನಿಸಿದರು.
ಇನ್ನೊಂದು ಪಂದ್ಯದಲ್ಲಿ 21 ವರ್ಷದ ಲಿಂಡಾ ನೋಸ್ಕೋವಾ 6-3, 7-5 ನೇರ ಸೆಟ್‌ಗಳಿಂದ ಬೆಲ್ಜಿಯಂ ಎಲಿನಾ ಮೆರ್ಟೆನ್ಸ್ ಎದುರು ಗೆದ್ದು, ಮೊದಲ ಬಾರಿ ಸೆಮೀಸ್‌ಗೇರಿದರು. ಹಾಲಿ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಉಳಿದಿರುವ ಕಿರಿಯ ಆಟಗಾರ್ತಿಯೂ ಎನಿಸಿದ್ದಾರೆ. 10ನೇ ಶ್ರೇಯಾಂಕಿತೆ ಕರೋಲಿನಾ ಮುಚೋವಾ, 14ನೇ ಶ್ರೇಯಾಂಕಿತೆ ನವೊಮಿ ಒಸಾಕಾ ಓಟಕ್ಕೆ ತೆರೆ ಎಳೆದರು. 29 ವರ್ಷದ ಮುಚೋವಾ 7-6, 6-4 ನೇರ ಸೆಟ್‌ಗಳಿಂದ 14ನೇ ಶ್ರೇಯಾಂಕಿತೆ ನವೊಮಿ ಒಸಾಕಾ ಎದುರು ಗೆಲುವು ದಾಖಲಿಸಿದರು.
ಮೊದಲ ಬಾರಿಗೆ ಗ್ರಾಸ್ ಕೋರ್ಟ್‌ನಲ್ಲಿ ಸೆಮಿಫೈನಲ್‌ಗೇರಿರುವ ಮುಚೋವಾ, ಅಮೆರಿಕದ ಕೋಕೋ ಗೌಫ್​ ವಿರುದ್ಧ ಕಣಕ್ಕಿಳಿಯಲಿದ್ದಾರೆ. ವಿಂಬಲ್ಡನ್‌ನಲ್ಲಿ 4ರ ಘಟ್ಟಕ್ಕೇರಿದ ಜೆಕ್ ಗಣರಾಜ್ಯದ 4ನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಮುಚೋವಾ ಪಾತ್ರರಾದರು. 4 ಗ್ರಾಂಡ್ ಸ್ಲಾಂ ವಿಜೇತೆ ಒಸಾಕಾ 2021ರಲ್ಲಿ ಕೊನೆಯದಾಗಿ ಮೇಜರ್ ಪ್ರಶಸ್ತಿ ಜಯಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net