ಸಿಎಸ್​ಕೆ-ಎಸ್​ಆರ್​ಎಚ್ ಪಂದ್ಯಕ್ಕೆ​ ವರುಣನ ಆತಂಕ? ಮ್ಯಾಚ್​ ರದ್ದಾದರೆ ಯಾರಿಗೆ ಚಾನ್ಸ್​? | SRH vs CSK

SRH vs CSK ಪಂದ್ಯಕ್ಕೆ ಮಳೆ ಅಡ್ಡಿ ಆತಂಕ
SRH vs CSK ಪಂದ್ಯಕ್ಕೆ ಮಳೆ ಅಡ್ಡಿ ಆತಂಕ
Published on
SRH vs CSK: 19ನೇ ಐಪಿಎಲ್​ ಆವೃತ್ತಿಯ ಪ್ಲೇಆಫ್​ ರೇಸ್​ಗೆ ಸರ್ಧೆ ನಡೆಸುತ್ತಿರುವ ತಂಡಗಳ ಕಣ್ಣು ಅಂಕಪಟ್ಟಿಯ ಅಗ್ರ 4 ಸ್ಥಾನಗಳ ಮೇಲಿದೆ. ಈಗಾಗಲೇ ಪ್ಲೇಆಫ್​ ಪ್ರವೇಶಿಸಿರುವ ಆರ್​ಸಿಬಿ, ಅಧಿಕೃತವಾಗಿ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ. ಇನ್ನುಳಿದ ಮೂರು ಸ್ಥಾನಗಳಿಗೆ ಕಾದಾಟ ನಡೆಯುತ್ತಿದೆ. ಹೀಗಿರುವಾಗ, ಇಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ನಿರ್ಣಾಯಕ ಪಂದ್ಯಕ್ಕೆ ವರುಣನ ಭೀತಿ ಕಾಡಲಾರಂಭಿಸಿದೆ. ​
ದೇಶದ ಹಲವು ರಾಜ್ಯಗಳಲ್ಲಿ ಬಿರುಸಿನ ಗಾಳಿ ಮತ್ತು ಮಳೆ ಸುರಿಯುತ್ತಿದೆ. ಹೀಗಿರುವಾಗ, ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಆರಂಭವಾಗಲಿರುವ ಪಂದ್ಯಕ್ಕೆ ವರುಣ ಅಡಚಣೆ ಉಂಟಾಗಬಹುದು ಎಂಬ ಸುದ್ದಿಗಳು ಹೊರಬಿದ್ದ ಬೆನ್ನಲ್ಲೇ ಪ್ಲೇಆಫ್‌ ಲೆಕ್ಕಾಚಾರಗಳು ಹೇಗೆ ಎನ್ನುವ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಅಷ್ಟಕ್ಕೂ ಮಳೆ ಬಂದರೆ ಯಾವ ತಂಡಕ್ಕೆ ಅವಕಾಶ? ಗೇಟ್​ಪಾಸ್? ಎಂಬುದೇ ಸದ್ಯ ಕುತೂಹಲಕಾರಿ.
ವರದಿಗಳ ಪ್ರಕಾರ, ಈ ಪಂದ್ಯ ಆರಂಭದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ.70ರಷ್ಟು ಇದೆ ಎನ್ನಲಾಗಿದೆ. ಅಲ್ಲಲ್ಲಿ ವರುಣನ ಅಡಚಣೆ ಉಂಟಾದರೆ, ಒಂದಷ್ಟು ಓವರ್​ಗಳನ್ನು ಕಡಿತಗೊಳಿಸಿ ಆಡಿಸಲಾಗುತ್ತದೆ. ಅದೇ ಭಾರೀ ಮಳೆ ಬಂದು ಪಂದ್ಯ ಏನಾದರೂ ರದ್ದಾದರೆ ಮುಂದೇನು? ಎಂಬುದಕ್ಕೆ ಹೀಗಿದೆ ಉತ್ತರ.
ಈ ಪಂದ್ಯ ಮಳೆಯಿಂದಾಗಿ ರದ್ದಾದರೆ, ಹೈದರಾಬಾದ್ ಖಾತೆಗೆ 15 ಅಂಕಗಳು ಸೇರಲಿವೆ. ಮತ್ತು ಆರ್​ಸಿಬಿ ವಿರುದ್ಧದ ಕೊನೆಯ ಪಂದ್ಯವನ್ನು ಗೆದ್ದರೆ ಮಾತ್ರ ಅವರು ಪ್ಲೇಆಫ್‌ಗೆ ಎಂಟ್ರಿ ಕೊಡಲು ಅವಕಾಶ ಸಿಗಲಿದೆ. ಅದೇ ಬೆಂಗಳೂರು ವಿರುದ್ಧ ಸೋತರೆ, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಫಲಿತಾಂಶಗಳ ಮೇಲೆ ಎಂಟ್ರಿಯ ಸಾಧ್ಯತೆ ನಿರ್ಧಾರವಾಗಲಿದೆ.
ಇದು ಎಸ್​ಆರ್​ಎಚ್​ ಕಥೆಯಾದರೆ, ಇನ್ನು ಚೆನ್ನೈ ಸೂಪರ್ ಕಿಂಗ್ಸ್​ಗೆ ಪ್ಲೇಆಪ್​ ದೂರವಾಗಲಿದೆ. ಪಂದ್ಯ ರದ್ದಾದರೆ, 1 ಅಂಕದಿಂದ ಸಿಎಸ್​ಕೆ 13 ಪಾಯಿಂಟ್​ಗಳಿಗೆ ತಲುಪಲಿದೆ. ಇದರರ್ಥ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಮುಂದಿನ ಪಂದ್ಯವನ್ನು ಗೆದ್ದರೂ ಪ್ಲೇಆಫ್ ತಲುಪುವುದು ಕಠಿಣವಾಗಲಿದೆ. ರಾಜಸ್ಥಾನ ರಾಯಲ್ಸ್ ತಮ್ಮ ಉಳಿದ ಪಂದ್ಯಗಳನ್ನು ಸೋಲಬೇಕು ಮತ್ತು ಪಂಜಾಬ್ ಕಿಂಗ್ಸ್ ಕೂಡ ತಮ್ಮ ಕೊನೆಯ ಪಂದ್ಯವನ್ನು ಸೋಲಬೇಕು. ಆಗ ಮಾತ್ರ ಚೆನ್ನೈಗೆ ಪ್ಲೇಆಫ್​ ಪ್ರವೇಶಿಸಲು ಅವಕಾಶ ಸಿಗುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net