ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಟಿ20 ವಿಶ್ವಕಪ್ ಟೂರ್ನಿಯ ಅಧಿಕೃತ ಪ್ರಸಾರಕರಾದ "ಜಿಯೋಸ್ಟಾರ್'ನಿಂದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಭಾರತ ವಿರುದ್ಧ ಆಡದಿದ್ದರೆ ಐಸಿಸಿ, ಪಾಕಿಸ್ತಾನಕ್ಕೆ ನೀಡಬೇಕಾದ ತನ್ನ ಆದಾಯದ ಪಾಲಿನ ಮೊತ್ತವಾದ 315 ಕೋಟಿ ರೂ.ಗಳನ್ನು ತಡೆಹಿಡಿಯಲಿದೆ. ಈ ಆರ್ಥಿಕ ಹೊಡೆತದೊಂದಿಗೆ ಪಿಸಿಬಿ ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ. ಯಾಕೆಂದರೆ ಈ ಮೊದಲೇ ಆಗಿರುವ ಒಪ್ಪಂದದ ಅನ್ವಯ ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ (ಶ್ರೀಲಂಕಾ) ತಾಣದಲ್ಲಿ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ತಂಡಕ್ಕೆ ಪಾಕ್ನಲ್ಲಿ ಆಡಲು ಕೇಂದ್ರ ಸರ್ಕಾರ ಅನುಮತಿ ನೀಡದಿದ್ದರೂ, ತಟಸ್ಥ ಸ್ಥಳದಲ್ಲಿ ಆಡದಂತೆ ತಡೆಹಿಡಿದಿರಲಿಲ್ಲ. ಹೀಗಾಗಿ ಪಾಕ್ ನಿಲುವಿಗೆ ಯಾವುದೇ ಸಮರ್ಥನೆ ಇಲ್ಲ ಎನ್ನಲಾಗಿದೆ. ಪ್ರಸಾರಕರು ಐಸಿಸಿ ಜತೆ ಒಪ್ಪಂದ ಮಾಡಿಕೊಂಡಾಗ, ಪ್ರತಿ ಟೂರ್ನಿಯಲ್ಲೂ ಭಾರತ-ಪಾಕ್ ಪಂದ್ಯದ ಖಚಿತತೆಗಾಗಿ ಹೆಚ್ಚಿನ ಮೊತ್ತ ನೀಡಲು ಒಪ್ಪಿಕೊಂಡಿದ್ದರು. ಹೀಗಾಗಿ ಪ್ರಸಾರಕರು, ಐಸಿಸಿ-ಪಿಸಿಬಿ ಇಬ್ಬರನ್ನೂ ನ್ಯಾಯಾಲಯಕ್ಕೆ ಎಳೆಯುವ ಹಕ್ಕು ಹೊಂದಿರುತ್ತಾರೆ ಎನ್ನಲಾಗಿದೆ.